ಕೆಎಸ್ ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ಬೆಂಗಳೂರು, 07 ಜೂನ್ (ಹಿ.ಸ.) : ಆ್ಯಂಕರ್ : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಬಲಿಯಾದ ಪ್ರಕರಣವು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆಯಾಗಿದೆ. ಸಿಐಡಿಯ ವಿಶೇಷ ತನಿಖಾ ತಂಡಕ್ಕೆ ಪ್ರ
Stamped case


ಬೆಂಗಳೂರು, 07 ಜೂನ್ (ಹಿ.ಸ.) :

ಆ್ಯಂಕರ್ : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಬಲಿಯಾದ ಪ್ರಕರಣವು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆಯಾಗಿದೆ.

ಸಿಐಡಿಯ ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಸಿಐಡಿ ಎಸ್‌ಪಿ ಶುಭನ್ವಿತಾ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಪುರುಷೋತ್ತಮ್ ಹಾಗೂ ಗೌತಮ್ ಅವರನ್ನೊಳಗೊಂಡ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿದೆ.

ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ಆರ್​ಸಿಬಿ ಫ್ರಾಂಚೈಸಿಯ ಮಾರ್ಕೆಟಿಂಗ್​ ವಿಭಾಗದ ಮುಖ್ಯಸ್ಥ​​​​​​​ ನಿಖಿಲ್​ ಸೋಸ್ಲೆ, ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ಡಿಎನ್​ಎ ಎಂಟರ್​ಟೈನ್ಮೆಂಟ್ ಮ್ಯಾನೇಜ್​ಮೆಂಟ್​​ ಕಂಪನಿಯ ಪ್ರತಿನಿಧಿಗಳಾದ ಸುನಿಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದು ಮತ್ತು ನಾಳೆ ಸರ್ಕಾರಿ ರಜೆ ದಿನವಾದ್ದರಿಂದ ಸೋಮವಾರ ಆರೋಪಿಗಳನ್ನು ಸಿಐಡಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಈ ನಡುವೆ ಪ್ರಕರಣದ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಪಾತ್ರ ಸೀಮಿತವಾಗಿದ್ದರೂ ಸಹ ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡುತ್ತಿರುವುದಾಗಿ ಇಬ್ಬರೂ ಸಹ ಕೆಎಸ್​ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಪತ್ರ ರವಾನಿಸಿದ್ದಾರೆ.

ಕಳೆದ 2 ದಿನಗಳ ಹಿಂದೆ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಯಲ್ಲಿ ನಮ್ಮ ಪಾತ್ರವು ಬಹಳ ಸೀಮಿತವಾಗಿದ್ದರೂ ಸಹ ನೈತಿಕ ಜವಾಬ್ದಾರಿಯಿಂದ ಜೂನ್ 6 ರ ರಾತ್ರಿಯಿಂದಲೇ ತಾವು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದು ಎ.ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಡಿಸಿಎಂ ವಿರುದ್ದ ದೂರು

ಆರ್​ಸಿಬಿ ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳಿಗೆ ಮತ್ತು ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಜವಾಬ್ದಾರಿ ಹೊರಬೇಕು ಮತ್ತು ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಬಿಜೆಪಿ ನಿಯೋಗ ಶುಕ್ರವಾರ ರಾತ್ರಿ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಗೆ ದೂರು ನೀಡಿದೆ.

ಇದರ ಬೆನ್ನಲ್ಲೇ ಆರ್​ ಸಿಬಿ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ಪ್ರಕರಣ ದಾಖಲಿಸುವಂತೆ ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ. ಈ ಕುರಿತು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಲವು ಗಂಟೆಗಳ ಬಳಿಕ ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರಿಂದ ದೂರು ಸ್ವೀಕರಿಸಿದ್ದು, ಎಫ್ ಐ ಆರ್ ಜೊತೆಗೆ ಕೊಹ್ಲಿ ವಿರುದ್ಧದ ದೂರನ್ನು ಪರಿಗಣಿಸುವುದಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಿಂಬರಹ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande