ರಾಯಚೂರು, 03 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ವಿಬಿಡಿಸಿ ಕಾರ್ಯಕ್ರಮಗಳ ಅಡಿಯಲ್ಲಿ 2025-26ನೇ ಸಾಲಿಗೆ ಮಂಜೂರಾದ 25 ಸ್ವಯಂ ಸೇವಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದ್ದು, ಜೂನ್ 11ರ ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ರಾಯಚೂರು-8, ಸಿಂಧನೂರು-4, ಮಾನ್ವಿ-4, ಲಿಂಗಸುಗೂರು-5 ಹಾಗೂ ದೇವದುರ್ಗ-4 ಸ್ವಯಂ ಸೇವಕರ ಸೇವೆಯನ್ನು ಹಂಚಿಕೆ ಮಾಡಲಾಗಿರುತ್ತದೆ.
ಷರತ್ತು, ನಿಬ0ದನೆಗಳು : ಜಿಲ್ಲಾ ವಿಬಿಡಿಸಿ ಕಾರ್ಯಕ್ರಮದ ಅಡಿಯಲ್ಲಿ 2025-26ನೇ ಸಾಲಿಗೆ 100 ದಿನಗಳಿಗೆ ಮಾತ್ರ ಒಪ್ಪಂದದ ಅವಧಿ ಇರುತ್ತದೆ. ಡೆಂಗಿ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಈಡಿಸ್ ಲಾರ್ವಾ ಉತ್ಪತ್ತಿ ತಾಣ ಚಟುವಟಿಕೆಯನ್ನು ನಗರ ಹಾಗೂ ಪಟ್ಟಣ ಪ್ರದೇಶಗಳ ಡೆಂಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೈಗೊಳ್ಳಲು 25 ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಚಟುವಟಿಕೆಯಲ್ಲಿ ಭಾಗವಹಿಸುವ ಸ್ವಯಂ ಸೇವಕರು ಕನಿಷ್ಟ ಎಸ್ಎಸ್ಎಲ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಚಟುವಟಿಕೆಯ ನಮೂನೆಯನ್ನು ಭರ್ತಿ ಮಾಡಲು ಸಶಕ್ತರಾಗಿರಬೇಕು, ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು, ದೈನಂದಿನ ಕ್ರಿಯಾ ಯೋಜನೆಯ ಅನ್ವಯ ನಿಗದಿತ ವೇಳಾಪಟ್ಟಿಯಂತೆ ಚಟುವಟಿಕೆಗೆ ತಪ್ಪದೇ ಹಾಜರಾಗಬೇಕು, ಚಟುವಟಿಕೆಗೆ ಅಗತ್ಯವಿರುವ ವರದಿ ನಮೂನೆಗಳು ಹಾಗೂ ಲಾರ್ವಾನಾಶಕ ದ್ರಾವಣ ಇತ್ಯಾದಿಗಳ ಸಮೇತ ಚಟುವಟಿಕೆಯಲ್ಲಿ ಭಾಗವಹಿಸಬೇಕು.
ದಿನ ಒಂದಕ್ಕೆ ಕನಿಷ್ಠ 60 ರಿಂದ 65 ಅವರಣಗಳು ಅಂದರೆ ಮನೆಗಳು, ಕಚೇರಿ, ಆಸ್ಪತ್ರೆ, ಶಾಲೆ ಹಾಗೂ ಕಾಲೇಜು. ವಾಣಿಜ್ಯ ಸಂಕೀರ್ಣಗಳು, ಸಿನೆಮಾ ಹಾಲ್ ಹಾಗೂ ಇತ್ಯಾದಿಗಳಲ್ಲಿ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳ ನಾಶ ಮಾಡುವ ಚಟುವಟಿಕೆಯನ್ನು ಕೈಗೊಳ್ಳಬೇಕು, ದೈನಂದಿನ ಹಾಜರಿ ಚಟುವಟಿಕೆಯ ಸಂದರ್ಭದಲ್ಲಿ ಜಿಯೋ ಟ್ಯಾಗ್ ಪೀಚರ್ಸ್ ಹಾಗೂ ನಿಗದಿತ ವರದಿಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಬೇಕು.
ಆಸಕ್ತರು ಸ್ವಯಂ ಸೇವಕರು ಜೂನ್ 11ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ರಾಯಚೂರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಾರ್ಯಾಲಯಕ್ಕೆ ತಮ್ಮ ಸ್ವ-ವಿವರದೊಂದಿಗೆ ವಿದ್ಯಾಭ್ಯಾಸದ ಪ್ರಮಾಣ ಪತ್ರ ಹಾಗೂ ಅನುಭವ ಪ್ರಮಾಣ ಪತ್ರ ಮತ್ತು ಇತರೇ ಪ್ರಮಾಣ ಪತ್ರಗಳನ್ನು ಜೆರಾಕ್ಸ್ ಪ್ರತಿಗಳಿಗೆ ಗೆಜಿಟೆಡ್ ಅಧಿಕಾರಿಗಳಿಂದ ಧೃಢೀಕರಿಸಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ನೇಮಕಾತಿಯು ಎನ್.ಹೆಚ್.ಎಂ. ಹಾಗೂ ಎನ್.ಯು.ಹೆಚ್.ಎಂ. ನಿಯಮಾವಳಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್