ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ
ಮಾವು ಬೆಳೆಗಾರರಿಗೆ ಸಂಕಷ್ಟಕ್ಕೆ ಸ್ಪಂಧಿಸಿದ ಕೇಂದ್ರ ಸರ್ಕಾರ ; ಬೆಂಬಲ ಬೆಲೆ ಘೋಷಣೆ
ಬೆಲೆ ಕುಸಿತದಿಂದ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರು ರಸ್ತೆಗೆ ಮಾವು ಚೆಲ್ಲಿ ಪ್ರತಿಭಟನೆ ನಡೆಸಿದರು.


ಕೋಲಾರ, ೨೪ ಜೂನ್ (ಹಿ.ಸ) :

ಆ್ಯಂಕರ್ : ಕಳೆದ ಹಲವು ದಿನಗಳಿಂದ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಶ್ರೀನಿವಾಸಪುರ ತಾಲ್ಲೂಕಿನ ರೈತರು ಸಮರ ಶೀಲ ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಕೇಂದ್ರದ ಈ ನಿರ್ಧಾರವನ್ನು ಮಾವು ಬೆಳೆಗಾರರು ಸ್ವಾಗತಿಸಿದ್ದಾರೆ.

ಮನವಿ ಮಾಡಿದ ಕೂಡಲೇ ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಉತ್ಪನ್ನಗಳಿಗೆ ಸ್ಥಿರ ಬೆಲೆಯ ಖಾತರಿ ಸದಾ ಇರುತ್ತದೆ ಎಂಬುದನ್ನು ಈ ಉಪಕ್ರಮವು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದಿರುವ ಅವರು, ಈ ಬಗ್ಗೆ ತುರ್ತು ಕ್ರಮ ವಹಿಸಿ ರಾಜ್ಯ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೃಷಿ ಸಚಿವರಿಗೆ ಪತ್ರದ ಮೂಲಕ ವಿನಂತಿಸಿದ್ದರು.

ಕುಮಾರಸ್ವಾಮಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವರು, ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ೨೦೨೫-೨ ೬ನೇ ಸಾಲಿಗೆ ಅನ್ವಯ ಆಗುವಂತೆ ೨,೫೦,೦೦೦ ಮೆಟ್ರಿಕ್ ಟನ್ ಮಾವನ್ನು ಪ್ರತೀ ಕ್ವಿಂಟಾಲ್ ಗೆ ₹೧೬೧೬ ರಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮುನ್ನ ಸಚಿವ ಕುಮಾರಸ್ವಾಮಿ ಅವರು, ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು.

ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣಕ್ಕೆ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂಥ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕುಮಾರಸ್ವಾಮಿ ಅವರು ಕೋರಿದ್ದರು.

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು ೧.೩೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು ೮ ರಿಂದ ೧೦ ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ದುರದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನ ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.೩೦ರಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಾವು ಬೆಳೆಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಿನ್ನಪ್ಪರೆಡ್ಡಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಬೆಂಬಲ ಬೆಲೆ ಯೋಜನೆಯನ್ನು ಜಾರಿಗೆ ತರಬೇಕು. ಈ ಬಗ್ಗೆ ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ೨೦೧೮ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಕೂಡಲೇ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿದ್ದರು. ರೈತರ ಬಗ್ಗೆ ಕುಮಾರಸ್ವಾಮಿಯವರದ್ದು ತಾಯಿ ಹೃದಯ ಆಗಿದೆ. ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸಹ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತುಟಿ ಬಿಚ್ಚಿಲ್ಲ. ರೈತರ ಪಾಲಿಗೆ ಅವರು ಸತ್ತು ಹೋಗಿದ್ದಾರೆ ಎಂದು ಚಿನ್ನಪ್ಪರೆಡ್ಡಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಶ್ರೀನಿವಾಸಪುರ ಮಾಜಿ ಶಾಸಕ ರಮೇಶ್ ಕುಮಾರ್ ಇದಕ್ಕೆ ಕಾರಣರಾಗಿದ್ದಾರೆ. ಚುನಾವಣೆಯಲ್ಲಿ ಸೋತ ಕಾರಣ ಅವರು ರೈತರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಚಿನ್ನಪ್ಪರೆಡ್ಡಿ ಆರೋಪಿಸುತ್ತಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಜೂನ್ ೯ ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು. ಅವರೊಂದಿಗೆ ಕುಮಾರಸ್ವಾಮಿ ಸಹ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು.

ಸಂಗ್ರಹ ಚಿತ್ರ : ಬೆಲೆ ಕುಸಿತದಿಂದ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರು ರಸ್ತೆಗೆ ಮಾವು ಚೆಲ್ಲಿ ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande