ಕೊಪ್ಪಳ, 20 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಅಭಿವೃದ್ಧಿ ಮತ್ತು ಮೀಸಲಾತಿ ಸಲಹಾ ಸಮಿತಿಗೆ ಅಲೆಮಾರಿ ಜನಾಂಗದ ಅಭಿವೃದ್ಧಿ ಸಮಿತಿ ಸದಸ್ಯರುಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ.
ನಾಮನಿರ್ದೇಶಿತ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಅಲೆಮಾರಿ/ಅರೆ ಅಲೆಮಾರಿ ಸಮುದಾಯದ ಜನಾಂಗದವರಿಗೆ ಪ್ರತಿನಿಧಿತ್ವ ವಹಿಸಿ ಸಮಾಜ ಕಾರ್ಯ ನಿರ್ವಹಿಸಿರಬೇಕು. ಅಲೆಮಾರಿ/ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಈ ಕುರಿತು ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಜಾತಿ ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು.
ಅಲೆಮಾರಿ/ಅರೆಅಲೆಮಾರಿ ಸಮಾಜದ ಏಳಿಗಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಕುರಿತು ದಾಖಲೆಗಳನ್ನು ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದವರಾಗಿರಬೇಕು. ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಬೇಕು. ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿಲ್ಲವೆಂದು ರೂ.100/- ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ನೋಟರಿ ಮುಖಾಂತರ ಸಲ್ಲಿಸಬೇಕು.
ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಂದ ನಿಗದಿತ ನಮೂನೆ ಪಡೆದು ಭರ್ತಿ ಮಾಡಿ ಜುಲೈ 09 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್