ಅಗ್ರ ಪಂಕ್ತಿಯಲ್ಲಿ ಭಾರತದ ಅಕ್ಕಿ ರಫ್ತು
* ಬಾಸ್ಮತಿ, ಬಾಸ್ಮತಿಯೇತರ ಅಕ್ಕಿ ರಫ್ತು ಗಣನೀಯ ಹೆಚ್ಚಳ * ಕಳೆದ ವರ್ಷಕ್ಕಿಂತ ಅಧಿಕ ಸಾಗಣೆ; $12.47 ಬಿಲಿಯನ್ ರಫ್ತು * ಹಣ್ಣು, ತರಕಾರಿ ಮತ್ತು ಮಾಂಸ ಉತ್ಪನ್ನದಲ್ಲೂ ಭರ್ಜರಿ ವಹಿವಾಟು
Rice


ಬೆಂಗಳೂರು, 17 ಜೂನ್ (ಹಿ.ಸ.) :

ಆ್ಯಂಕರ್ : ಜಗತ್ತಿನಲ್ಲಿ ರಷ್ಯಾ-ಯುಕ್ರೇನ್‌, ಇರಾನ್‌-ಇಸ್ರೇಲ್‌, ಇಸ್ರೇಲ್‌-ಹಮಾಸ್‌ ಯುದ್ಧದ ಸಂದಿಗ್ಧ ದಿನಮಾನದಲ್ಲೂ ಭಾರತ ರಫ್ತು ವಲಯದಲ್ಲಿ ದಾಖಲೆ ನಿರ್ಮಿಸಿದೆ. ಕೃಷಿ-ಆಹಾರ ಪದಾರ್ಥ ರಫ್ತುವಿನಲ್ಲಿ ಐತಿಹಾಸಿಕ ಸಾಧನೆಗೈದಿದೆ. ಅಕ್ಕಿ ರಫ್ತು ಬರೋಬ್ಬರಿ $12.47 ಬಿಲಿಯನ್ ದಾಟಿದೆ.

ಆಮದು ಯುಗದಿಂದ ಹೊರ ಬಂದ ಭಾರತವೀಗ ವಿಶ್ವದ ರಾಷ್ಟ್ರಗಳಿಗೆ ಕೃಷಿ, ಆಹಾರೋತ್ಪನ್ನಗಳ ರಫ್ತು ಮಾಡುವಲ್ಲಿ ಮಹತ್ತರ ಹೆಜ್ಜೆಯಿರಿಸಿದ್ದು, ಪ್ರಸಕ್ತ ಆರ್ಥಿಕ ವರ್ಷಾರಂಭದ ದಿನಗಳಲ್ಲೇ ದಾಖಲೆಯ ಅಕ್ಕಿ ರಫ್ತು ಮಾಡಿದ್ದು, ಬಾಸ್ಮತಿ, ಬಾಸ್ಮತಿಯೇತರ ಅಕ್ಕಿ ರಫ್ತು ಗಣನೀಯ ಹೆಚ್ಚಳ ಕಂಡಿದೆ.

2025ರ ಏಪ್ರಿಲ್‌ನಲ್ಲಿ ಅಕ್ಕಿ ರಫ್ತು ಶೇ.13ಕ್ಕಿಂತ ಅಧಿಕ ಅಂದರೆ, US $1.08 ಬಿಲಿಯನ್‌ ಏರಿಕೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಅಕ್ಕಿ ರಫ್ತು ಶೇ.19.73ರಷ್ಟು ಹೆಚ್ಚು US $12.47 ಬಿಲಿಯನ್ ತಲುಪಿದೆ. ಇದು 2023-24ಕ್ಕೆ (US $10.42) ಹೋಲಿಸಿದರೆ ಸರಿಸುಮಾರು ಶೇ.20ಕ್ಕೂ ಅಧಿಕವಾಗಿರುವುದು ನಿಜಕ್ಕೂ ಐತಿಹಾಸಿಕ ಸಾಧನೆ.

ದೇಶದಲ್ಲಿ ಈ ಬಾರಿ ಭತ್ತದ ಬೆಳೆ ಅತ್ಯಧಿಕವಾಗಿದ್ದರಿಂದ ಕೇಂದ್ರ ಸರ್ಕಾರ 2024ರ ಸೆಪ್ಟೆಂಬರ್‌ನಲ್ಲಿ ಅಕ್ಕಿ ರಫ್ತಿನ ಮೇಲಿನ ನಿರ್ಬಂಧ ತೆರವುಗೊಳಿಸಿತು. ಕನಿಷ್ಠ ರಫ್ತು ಬೆಲೆ ಸೇರಿದಂತೆ ಒಂದು ವರ್ಷ ಕಾಲ ವಿಧಿಸಿದ್ದ ನಿರ್ಬಂಧಗಳನ್ನೆಲ್ಲ ರದ್ದುಪಡಿಸಿ ಜಾಗತಿಕ ಅಕ್ಕಿ ವಹಿವಾಟಿಗೆ ಅನುವು ಮಾಡಿತು. ಇದರ ಪರಿಣಾಮ ಅಕ್ಕಿ ರಫ್ತುವಿನಲ್ಲಿ ಭಾರತ ಅಗ್ರ ಪಂಕ್ತಿಯಲ್ಲಿದೆ.

ಕೇಂದ್ರ ಸರ್ಕಾರದ ಸಮಯೋಚಿತ ನಿರ್ಧಾರದಿಂದ ಜಾಗತಿಕವಾಗಿ ಅಕ್ಕಿ ವ್ಯಾಪಾರದಲ್ಲಿ ಭಾರತ ಪುನಃ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿದೆ. ವಿಶೇಷವಾಗಿ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ಅಕ್ಕಿ ರಫ್ತಿನಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದೊಂದು ದಶಕದಿಂದಲೂ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಈಗಲೂ ಅದೇ ಗುರಿಯೊಂದಿಗೆ ಮುನ್ನಡೆದಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಭಾರತದ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಗೆ ಜಾಗತಿಕ ಬೇಡಿಕೆ ಹೆಚ್ಚುವ ಸಾಧ್ಯತೆಯಿದ್ದು, ಈ ಹಣಕಾಸು ವರ್ಷದಲ್ಲಿ ಅಕ್ಕಿ ರಫ್ತು ಶೇ.10-15ರಷ್ಟು ಹೆಚ್ಚುವ ನಿರೀಕ್ಷೆಯಿದೆ ಎನ್ನುತ್ತಾರೆ ಕೆಎನ್‌ಎಎಂ ಆಹಾರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗೋಯೆಲ್.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಸಹ ಅದ್ಭುತ ಪ್ರಗತಿ ಕಂಡಿದೆ. ಏಪ್ರಿಲ್ ನಲ್ಲಿ ರಫ್ತು ಪ್ರಮಾಣ ಶೇ.15ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಸುಮಾರು US $2.13 ಬಿಲಿಯನ್ ತಲುಪಿದೆ. ಅಕ್ಕಿ, ಮಾಂಸ, ಹಣ್ಣು ಮತ್ತು ತರಕಾರಿಗಳ ರಫ್ತಿಯಲ್ಲಿ ಸಹ ಗಣನೀಯ ಹೆಚ್ಚಳ ಕಂಡಿದೆ.

2025ರ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಭತ್ತದ ಬೆಳೆಯಲ್ಲಿ ಬಂಪರ್ ಫಸಲು ನಿರೀಕ್ಷಿಸಿದ್ದು, ಪ್ರಸಕ್ತ ಹಣಕಾಸು ವರ್ಷ ಮುಗಿಯುವಷ್ಟರಲ್ಲಿ ಅಕ್ಕಿ ಉತ್ಪಾದನೆ ಮತ್ತು ರಫ್ತು ಮತ್ತಷ್ಟು ಹೆಚ್ಚಾಗುವ ಅಂದಾಜಿದೆ. ಭಾರತೀಯ ಧಾನ್ಯ ಮತ್ತು ದ್ವಿದಳ ಧಾನ್ಯಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದ್ದು, 2020-2025ರ ಮಧ್ಯೆ ವಾರ್ಷಿಕ ಬೆಳವಣಿಗೆ ದರದಲ್ಲಿ ಶೇ.6.2ರಷ್ಟು ಪ್ರಗತಿ ಸಾಧಿಸಿದೆ.

*ಹಣ್ಣು-ತರಕಾರಿ ರಫ್ತಿನಲ್ಲಿ ಶೇ.30 ಏರಿಕೆ:* ವಾಣಿಜ್ಯ ಗುಪ್ತಚರ ಮತ್ತು ಅಂಕಿ-ಅಂಶಗಳ ನಿರ್ದೇಶನಾಲಯದ ಪ್ರಕಾರ ಭಾರತ ಅಕ್ಕಿ ಮಾತ್ರವಲ್ಲ, ತಾಜಾ ಹಣ್ಣುಗಳು ಮತ್ತು ತರಕಾರಿ ಸಾಗಣೆಯಲ್ಲಿ ಸಹ ಶೇ.30ಕ್ಕಿಂತ ಅಧಿಕ ಏರಿಕೆಯಾಗಲಿದ್ದು, US $0.38 ಬಿಲಿಯನ್‌ಕ್ಕೆ ತಲುಪಿದೆ. ಆಹಾರ ಧಾನ್ಯ ತಯಾರಿಕೆ ಶೇ.7ಕ್ಕಿಂತ ಹೆಚ್ಚಾಗಿ US $0.26 ಬಿಲಿಯನ್ ಆಗಿದೆ.

*ಮಾಂಸ, ಮಿಲ್ಕ್‌ ಉತ್ಪನ್ನಕ್ಕೂ ಹೆಚ್ಚಿದ ಬೇಡಿಕೆ:* ಗುಣಮಟ್ಟದ ಮಾಂಸ ಮತ್ತು ಪೌಷ್ಠಿಕ ಖಾದ್ಯಂದಾಗಿ ಭಾರತದ ಮಾಂಸ ಉತ್ಪನ್ನಗಳ ರಫ್ತಿನಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಪ್ರಪಂಚದ ಎಲ್ಲೆಡೆಯಿಂದ ಬಹು ಬೇಡಿಕೆ ಬರುತ್ತಿದೆ. ಏಪ್ರಿಲ್ 2024ಕ್ಕೆ ಹೋಲಿಸಿದರೆ ಎಮ್ಮೆ ಮಾಂಸ, ಡೈರಿ ಮತ್ತು ಕೋಳಿ ಉತ್ಪನ್ನಗಳ ರಫ್ತು ಪ್ರತಿ ವರ್ಷ ಶೇ.16ರಷ್ಟು ಹೆಚ್ಚಾಗುತ್ತಿದ್ದು, US $0.37 ಬಿಲಿಯನ್ ಆಗಿದೆ.

*APEDA ಅಡಿಯಲ್ಲಿ ಉತ್ಪನ್ನಗಳ ರಫ್ತು:* ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಅಡಿಯಲ್ಲಿ ಬರುವ ಉತ್ಪನ್ನಗಳ ರಫ್ತು 2024-25ರಲ್ಲಿ $25.14 ಬಿಲಿಯನ್ ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇ.12ರಷ್ಟು ಅಧಿಕಗೊಂಡಿದೆ. ಕೃಷಿ ಉತ್ಪನ್ನಗಳ ಒಟ್ಟು ಸಾಗಣೆಯಲ್ಲಿ APEDA ಅಡಿ ಬರುವ ಉತ್ಪನ್ನಗಳ ಪಾಲು ಶೇ.51ರಷ್ಟಿದೆ. ಉಳಿದ ಕೃಷಿ ಉತ್ಪನ್ನಗಳ ರಫ್ತಿಗೆ ಸಮುದ್ರ ಉತ್ಪನ್ನಗಳು, ತಂಬಾಕು, ಕಾಫಿ ಮತ್ತು ಚಹಾ ಸೇರಿವೆ.

ಒಟ್ಟಾರೆ ಭಾರತದ ಕೃಷಿ ಕ್ಷೇತ್ರ ದೇಶೀಯ ಬೇಡಿಕೆ ಪೂರೈಕೆ ಜತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸ್ತಿತ್ವ ಭದ್ರಪಡಿಸಿಕೊಂಡಿದೆ. ಕೃಷಿ ರಫ್ತು ದೇಶದ ಆರ್ಥಿಕತೆ ಜತೆಗೆ ರೈತರ ಆದಾಯ ಹೆಚ್ಚಳದಲ್ಲೂ ಮಹತ್ವದ ಪಾತ್ರ ವಹಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande