ಬಳ್ಳಾರಿ, 13 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಕೇಂದ್ರದಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ.21 ರಂದು ನಗರದ ಶೆಟ್ರ ಗುರುಶಾಂತಪ್ಪ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ನಿರ್ಧರಿಸಲಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಳೆ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಪರ್ಯಾಯ ವ್ಯವಸ್ಥೆಗೆ ಕಾರ್ಯಪ್ರವೃತ್ತರಾಗಿ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಆಗಮಿಸುವಂತೆ ಪ್ರಚಾರ ಕೈಗೊಳ್ಳಬೇಕು. ಪತಂಜಲಿ ಯೋಗ ಕೇಂದ್ರ, ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಯೋಗ ಕೇಂದ್ರಗಳು ಅಗತ್ಯವಾಗಿ ಸಹಕಾರ ನೀಡಬೇಕು ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಲಘು ಉಪಹಾರ ಮತ್ತು ನೀರಿನ ವ್ಯವಸ್ಥೆ, ಯೋಗಾಸನ ಮಾಡಲು ಗ್ರೀನ್ ಮ್ಯಾಟ್ ವ್ಯವಸ್ಥೆ ಮತ್ತು ವೇದಿಕೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಹಾಗೂ ಆವರಣದೊಳಗೆ ಸಂಪೂರ್ಣ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸಕೀನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಯೋಗ ಕೇಂದ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್