ಬೆಂಗಳೂರು, 07 ಮಾರ್ಚ್ (ಹಿ.ಸ.) :
ಆ್ಯಂಕರ್ : 2025-26ರ ಆಯವ್ಯಯವು ನಾನು ಮಂಡಿಸಿರುವ 16ನೇ ಆಯವ್ಯಯವಾಗಿದೆ. ನಾನು ಈವರೆಗೂ ಮಂಡಿಸಿರುವ ಪ್ರತಿ ಆಯವ್ಯಯದಲ್ಲಿಯೂ ವಿತ್ತೀಯ ಶಿಸ್ತನ್ನು ಪಾಲಿಸುವುದರ ಜೊತೆಗೆ ಬಡವರ, ಮಹಿಳೆಯರ, ಶೋಷಿತರ, ದುರ್ಬಲ ವರ್ಗದವರ ಏಳಿಗೆಗೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತೇನೆ. ಅಲ್ಲದೆ, ರಾಜ್ಯದ ಆರ್ಥಿಕ ಪ್ರಗತಿಗಾಗಿ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿರುತ್ತೇನೆ. ನಾನು ಮಂಡಿಸಿರುವ ಈ ೧೬ನೇ ಆಯವ್ಯಯವು ಇದೇ ಧ್ಯೇಯದೊಂದಿಗೆ ರೂಪಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವವು ಗಣನೀಯವಾಗಿ ಕಡಿಮೆಯಾಗಿದೆ. ಜಿ.ಎಸ್.ಟಿ ಪರಿಹಾರ ನಿಲ್ಲಿಸಿರುವುದರಿಂದ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿರುವುದರಿಂದ, ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್ ಚಾರ್ಜ್ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದ ಕಾರಣ ಮತ್ತು ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸ್ಸು ಮಾಡಿದ ವಿಶೇಷ ಅನುದಾನವನ್ನು ಬಿಡುಗಡೆ ಮಾಡದ ಕಾರಣ ರಾಜ್ಯಕ್ಕೆ 2,53,287 ಕೋಟಿ ರೂ.ಗಳ ರಾಜಸ್ವ ನಷ್ಟವಾಗಿರುತ್ತದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ಎದೆಗುಂದದೆ, ಸ್ವಂತ ಸಂಪನ್ಮೂಲವನ್ನು ಕ್ರೋಢೀಕರಿಸುವ ಮೂಲಕ ರಾಜ್ಯದ ವೆಚ್ಚ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳಾಗಿರುತ್ತದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ ೪ ಲಕ್ಷ ಕೋಟಿ ರೂ. ಗಳ ಗಡಿ ದಾಟಿರುವುದು, ಒಂದು ಹೊಸ ಮೈಲುಗಲ್ಲು. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಆಯವ್ಯಯ ಗಾತ್ರವು ಶೇ.10.3 ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಆಯವ್ಯಯ ಗಾತ್ರವು ಗಣನೀಯವಾಗಿ ಹೆಚ್ಚಳವಾಗಿದೆ. 2022-23ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರವು 2025-26ರ ಆಯವ್ಯಯದಲ್ಲಿ 4,09,549 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಆಯವ್ಯಯ ಗಾತ್ರವು ಶೇ.54ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು ಹಾಗೂ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆ ವ್ಯಕ್ತಪಡಿಸಿದರು. ಆದರೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ಅನುದಾನ ಒದಗಿಸುವ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುತ್ತೇವೆ. 2025-26ನೇ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 51,034 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ವಿಪಕ್ಷದವರು ಈಗ ತಾವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa