ಬಳ್ಳಾರಿ, 11 ಮಾರ್ಚ್ (ಹಿ.ಸ.)
ಆ್ಯಂಕರ್: ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲು ಹಿಂಜರಿಯುವ ಪ್ರಕ್ರಿಯೆ ಅಪಘಾತದ ಪ್ರಮಾಣ ಹೆಚ್ಚಿಸಲು ಕಾರಣವಾಗಿದೆ. ಈ ಸಮಸ್ಯೆಗೆ ಸುಧಾರಿತ ಪರಿಹಾರ ನೀಡುವ ಉದ್ದೇಶದಿಂದ ಬಳ್ಳಾರಿಯ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‍ನ 8ನೇ ಸೆಮಿಸ್ಟರ್ ವಿದ್ಯಾರ್ಥಿ ಆರ್. ದಾಮೋದರ್ ಸಿಂಗ್ ವಿನ್ಯಾಸ ಮಾಡಿರುವ `ಬ್ರೀತೆಬಲ್ ಹೆಲ್ಮೆಟ್’ ವಿಶ್ವದ ಗಮನ ಸೆಳೆದಿದೆ.
ಈ ಹೊಸ ತಂತ್ರಜ್ಞಾನವು ಗಾಳಿಯಾಡುವ ತಂತ್ರಜ್ಞಾನ ಹೊಂದಿದ್ದು, ತಲೆ ಬಿಸಿಯಾಗುವುದು, ಬೆವರಿನ ತೊಂದರೆ ಹಾಗೂ ಕೂದಲು ಉದುರುವ ಸಮಸ್ಯೆಗಳನ್ನು ತಡೆಯಲಿದೆ. ಈ ತಂತ್ರಜ್ಞಾನವು ಐ.ಎಸ್.ಐ. ಪ್ರಮಾಣಿತವಾಗಿ ಜನ ಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ (ಕೇವಲ ರೂ. 300/-ಗೆ) ಲಭ್ಯವಿದೆ. ಈ ಹೆಲ್ಮೆಟ್ ವಿಸ್ತೃತ ವ್ಯಾಪ್ತಿಯಲ್ಲಿ ತಯಾರಿಸಲು ಹೆಲ್ಮೆಟ್ ಕಂಪನಿಗಳು ಹಾಗೂ ಸರ್ಕಾರದ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ವಿನ್ಯಾಸಕ ವಿದ್ಯಾರ್ಥಿ ಆರ್. ದಾಮೋದರ್ ಸಿಂಗ್ ತಿಳಿಸಿದ್ದಾರೆ.
ಪ್ರಾಜೆಕ್ಟ್ ಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ:
ಈ ಆವಿಷ್ಕಾರ `ರಿಪಬ್ಲಿಕ್ ಪ್ಲಾನೆರಿ ಸಮಿಟ್-2025’ ರ `ಇನ್‌ಕ್ಲೂಸಿವ್ ನೇಷನ್ ಬಿಲ್ಲಿಂಗ್’ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ದೆಹಲಿಯ ಭಾರತ್ ಮಂಟಪ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಪ್ರಾಜೆಕ್ಟ್ ಯಶಸ್ವಿ ರೂಪುಗೊಳ್ಳಲು ಖ್ಯಾತ ವೃತ್ತಿಪರರು ಮಾರ್ಗದರ್ಶನ ನೀಡಿದ್ದಾರೆ. ಎಸ್ಪಿ ಡಾ. ಶೋಭಾರಾಣಿ.ವಿ.ಜೆ,
ವೈ.ಜೆ. ಪೃಥ್ವಿರಾಜ್ ಭೂಪಾಲ್, ಟ್ರಾಫಿಕ್ ಸಿಪಿಐ ಅಯ್ಯನಗೌಡ ವಿ. ಪಾಟೀಲ್, ಡಾ. ವಿದ್ಯಾವತಿ, ಡಾ. ಮಲ್ಲಿಕಾರ್ಜುನ ಅವರು ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ವಿದ್ಯಾರ್ಥಿ ಆರ್. ದಾಮೋದರ್ ಸಿಂಗ್‍ನ ಈ ಸಾಧನೆಯನ್ನು ಮೆಚ್ಚಿ ಬಳ್ಳಾರಿಯ ಪೋಲೀಸ್ ಇಲಾಖೆ ಏರ್ಪಡಿಸಿದ್ದ ಮ್ಯಾರಥಾನ್ ರನ್- 2025 ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿ, ಅಭಿನಂದಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್