
ಬಳ್ಳಾರಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಒಂದು ಸಾವಿರದ ಎಂಭತ್ತೊಂಬತ್ತು ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 12,000 ಎಕರೆ ಭೂಮಿಯ ಭೂ ಸಂತ್ರಸ್ತ ರೈತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದ ಮೇಲೆ ಶೀಘ್ರದಲ್ಲೇ ಈಡೇರಿಸಬೇಕು ಎಂದು ಬಳ್ಳಾರಿ - ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಳಗಾವಿಯ `ಸುವರ್ಣ ವಿಧಾನ ಸೌಧ'ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರಲ್ಲಿ ಪ್ರಶ್ನೆ ಕೇಳಿದ ಶಾಸಕ ವೈ.ಎಂ. ಸತೀಶ್ ಅವರು, ಕುಡತಿನಿ, ವೇಣಿವೀರಾಪುರ, ಸಿದ್ದಮ್ಮನಹಳ್ಳಿ, ಹರಗಿನಡೋಣಿ ಸೇರಿ ಸುತ್ತಲಿನ ವಿವಿಧ ಗ್ರಾಮಗಳ ಭೂಮಿಗಳನ್ನು ಸರ್ಕಾರ (ಕೆಐಡಿಬಿ) ಸ್ವಾಧೀನ ಮಾಡಿಕೊಂಡು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿದೆ. ಆದರೆ, ಕೈಗಾರಿಕೆಗಳು ಪ್ರಾರಂಭವಾಗದೇ ಉದ್ಯೋಗ ಸಿಗದೇ ಭೂ ಸಂತ್ರಸ್ತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿವೆ. ಅಲ್ಲದೇ, ಹೆಚ್ಚಿನ ಪರಿಹಾರ ನೀಡಲು ನ್ಯಾಯಾಲಯಗಳು ಆದೇಶ ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವ ಭೂ ಸಂತ್ರಸ್ತರ ಬೇಡಿಕೆಗಳನ್ನು ಸರ್ಕಾರ ಮಾನವೀಯತೆಯ ಆಧಾರದ ಮೇಲೆ ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಆಗ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರು, ಮೆ. ಆರ್ಸೆಲರ್ ಮಿತ್ತಲ್ ಇಂಡಿಯಾ ಲಿ, ಮೆ. ಉತ್ತಮ್ ಗಾಲ್ವಾ ಫೆರೋಸ್ ಲಿ, ಮೆ. ಕರ್ನಾಟಕ ವಿಜಯನಗರ ಸ್ಟೀಲ್ ಲಿ, (ಎನ್‍ಎಂಡಿಸಿ) ಯೋಜನೆಗಳಿಗಾಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಮೂರೂ ಕೈಗಾರಿಗಳ ಭೂ ಸಂತ್ರಸ್ತರು ಹೆಚ್ಚುವರಿ ಪರಿಹಾರಕ್ಕಾಗಿ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ. ಆರ್ಸೆಲರ್ ಮಿತ್ತಲ್ ಇಂಡಿಯಾವು ಪ್ರತೀ ಎಕರೆಗೆ 1.30 ಕೋಟಿ ರೂಪಾಯಿ ಪರಿಹಾರ ಪಾವತಿಗೆ ಆದೇಶ ನೀಡಿದೆ. ಈ ಮೊತ್ತವನ್ನು ಕಂಪನಿಯು ದಾವೆದಾರರಿಗೆ ಪಾವತಿಸಿದೆ. ಅಲ್ಲದೇ, ನ್ಯಾಯಾಲಯಗಳಲ್ಲಿ ಬಾಕಿ ಇರುವ 657 ಎಕರೆ ಜಮೀನುಗಳಿಗೂ ಆರ್ಸೆಲರ್ ಮಿತ್ತಲ್ ಕಂಪನಿಯು ಇದೇ ರೀತಿಯಲ್ಲಿ ಪರಿಹಾರವನ್ನು ಪಾವತಿ ಮಾಡಬೇಕಿದೆ ಎಂದು ವಿವರಿಸಿದರು.
ಉತ್ತಮ್ ಗಾಲ್ವಾ ಫೆರೋಸ್ ಲಿಮಿಟೆಡ್ ಕಂಪನಿಯು ಸ್ವಾಧೀನ ಮಾಡಿಕೊಂಡಿರುವ ಒಟ್ಟು ಭೂಮಿಯ ಪೈಕಿ 441 ಎಕರೆ ಭೂಮಿಗೆ ಸಾಮಾನ್ಯ ಐ ತೀರ್ಪು ರಚಿಸಲಾಗಿದೆ. ಈ ಪೈಕಿ 298 ಎಕರೆ ಜಮೀನಿನ ಮಾಲೀಕರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯಗಳಲ್ಲಿ ದಾವೆ ದಾಖಲಿಸಿದ್ದು, ನವೆಂಬರ್ - 2024 ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ ಕಂಪನಿಯು 17 ಕೋಟಿ ರೂಪಾಯಿ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿದೆ. ಅಲ್ಲದೇ, ಮುಖ್ಯಮಂತ್ರಿಗಳ ಜೊತೆ ಭೂ ಸಂತ್ರಸ್ತರ ಸಭೆ ನಡೆದಿದೆ. ಈ ಸಭೆಯಲ್ಲಿ ಪ್ರತಿಭಟನಾ ನಿರತರದಲ್ಲಿ ಸಮಯಾವಕಾಶ ಕೇಳಲಾಗಿದೆ ಎಂದರು.
ಆಗ, ವೈ.ಎಂ. ಸತೀಶ್ ಅವರು, ಭೂ ಸಂತ್ರಸ್ತ ಪ್ರತಿಭಟನಾ ನಿರತರು, `15 ವರ್ಷಗಳಿಂದ ಭೂ ಸಂತ್ರಸ್ತ ಕುಟುಂಬದ ಸದಸ್ಯರು ಉದ್ಯೋಗ - ಹೆಚ್ಚಿನ ಪರಿಹಾರ ಸೇರಿ ಬೇಡಿಕೆಗಳ ಈಡೇರಿಕೆಯ ನಿರೀಕ್ಷೆಯಲ್ಲಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಹೆಚ್ಚಿನ ಪರಿಹಾರ ಅಥವಾ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನು ಹಿಂದಿರುಗಿಸಿ ಕೃಷಿಯನ್ನು ನಡೆಸಲು ಸಹಕಾರ ನೀಡಬೇಕು' ಎಂದು ಮನವಿ ಮಾಡಿದ್ದಾರೆ.
ಉತ್ತರವಾಗಿ, ಸಚಿವ ಎಂ.ಬಿ. ಪಾಟೀಲ್ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಡ್ವಕೇಟ್ ಜನರಲ್ ಅವರ ಜೊತೆಯಲ್ಲಿ ಸಭೆ ನಡೆದಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿವೆ. ಉತ್ತಮ್ ಗಾಲ್ವಾ ಫೆರೋಸ್ ಲಿಮಿಟೆಡ್ ಕೈಗಾರಿಕೆಯ ಸ್ವರೂಪವನ್ನು ಬದಲಾವಣೆ ಮಾಡಲು ಕೋರಿದ್ದು, ಅರ್ಜಿ ಸಲ್ಲಿಸಲು ಸರ್ಕಾರ ಕೋರಿದೆ. ಆರ್ಸೆಲರ್ ಮಿತ್ತಲ್ ಇಂಡಿಯಾ ಬೇರೆ ರಾಜ್ಯದಲ್ಲಿ 1 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಭಾರತದಲ್ಲಿಯೇ ಅತಿ ದೊಡ್ಡದಾದ ಉಕ್ಕು ಕಾರ್ಖಾನೆಯನ್ನು ನಿರ್ಮಾಣ ಮಾಡುತ್ತಿದೆ. ಪ್ರತಿಭಟನಾನಿರತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದ ಮೇಲೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್