
ನವದೆಹಲಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಗೀತೆ ವಂದೇ ಮಾತರಂ 150ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಆರಂಭಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಗೀತೆಯ ಪ್ರಸ್ತುತತೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಇದ್ದಂತೆ ಇಂದಿಗೂ ಅಷ್ಟೇ ಪ್ರಬಲವಾಗಿದೆ ಮತ್ತು 2047ರ ವೇಳೆಗೆ ನಿರ್ಮಾಣವಾಗಲಿರುವ ಅಭಿವೃದ್ಧಿ ಹೊಂದಿದ ಭಾರತದ ಪಯಣದಲ್ಲಿ ಸಹ ಇದಕ್ಕೆ ಏರುಪೇರು ಆಗುವುದಿಲ್ಲ ಎಂದು ಹೇಳಿದ್ದಾರೆ.
ಅಮಿತ್ ಶಾ ತಮ್ಮ ಭಾಷಣದಲ್ಲಿ ವಂದೇ ಮಾತರಂ ಭಾರತ ಮಾತೆಯ ಬಗ್ಗೆ ಸಮರ್ಪಣೆ, ಕರ್ತವ್ಯ ಮತ್ತು ಭಕ್ತಿಯ ಮನೋಭಾವವನ್ನು ಜಾಗೃತಗೊಳಿಸುವ “ಅಮರ ಕೃತಿ” ಎಂದು ವರ್ಣಿಸಿದರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಎಲ್ಲೆಲ್ಲಿ ದೇಶಭಕ್ತರು ಒಟ್ಟುಗೂಡಿದರೂ ಅವರ ಸಭೆಗಳು ವಂದೇ ಮಾತರಂ ಗೀತೆಯಿಂದಲೇ ಆರಂಭವಾಗುತ್ತಿದ್ದವು ಎಂಬುದನ್ನು ಅವರು ನೆನಪಿಸಿದರು. ಇಂದೂ ಗಡಿಯಲ್ಲಿ ದೇಶಕ್ಕಾಗಿ ವೀರ ಸೈನಿಕರು ಬಲಿದಾನ ನೀಡುವ ಕ್ಷಣದಲ್ಲಿ ಅವರ ತುಟಿಗಳಲ್ಲಿರುವ ಪದಗಳು ಕೂಡ ಇದೇ — ವಂದೇ ಮಾತರಂ ಎಂದು ಅವರು ಹೇಳಿದರು.
ಚರ್ಚೆಯ ವಿಷಯ ರಾಜಕೀಯವನ್ನು ಮೀರಿದದ್ದಾಗಿದ್ದರೂ, ಕೆಲವರು ವಂದೇ ಮಾತರಂ ಗೀತೆಯನ್ನು ಬಂಗಾಳ ಚುನಾವಣೆಯೊಂದಿಗೆ ತಳಕು ಹಾಕಿ ಇದರ ಐತಿಹಾಸಿಕ ಮಹತ್ವವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವರು ಆರೋಪಿಸಿದರು. “ವಂದೇ ಮಾತರಂನ್ನು ಚರ್ಚಿಸುವ ಅಗತ್ಯ ರಚನೆಯ ಕಾಲದಲ್ಲಿದ್ದಂತೆ ಇಂದಿಗೂ ಇದೆ, ಅದರ ಪ್ರಸ್ತುತತೆಯನ್ನು ಪ್ರಶ್ನಿಸುವವರು ತಮ್ಮ ತಿಳುವಳಿಕೆಯನ್ನು ಮರುಪರಿಶೀಲಿಸಬೇಕು,” ಎಂದು ಅವರು ಹೇಳಿದರು.
ವಂದೇ ಮಾತರಂ ಗುಲಾಮಗಿರಿಯ ಬಂಧನಗಳನ್ನು ಮುರಿಯುವ ಘೋಷಣೆಯಾಗಿದ್ದು, ಸ್ವಾತಂತ್ರ್ಯ ಹೋರಾಟದ ಉತ್ಸಾಹ ಮತ್ತು ಸ್ಫೂರ್ತಿಯ ಮೂಲವಾಗಿದೆ. ಹುತಾತ್ಮರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದಾಗ ಮುಂದಿನ ಜನ್ಮದಲ್ಲೂ ಭಾರತದಲ್ಲಿ ಜನಿಸಿ ಭಾರತ ಮಾತೆಗೆ ಸೇವೆ ಮಾಡಲು ಈ ಘೋಷಣೆಯೇ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಬಂಕಿಮ್ ಚಂದ್ರ ಚಟರ್ಜಿ ರಚಿಸಿದ ಈ ಗೀತೆ ಭಾರತೀಯ ಸಾಂಸ್ಕೃತಿಕ ಸಂಪ್ರದಾಯ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಭಾರತವನ್ನು “ಭಾರತ ಮಾತೆ” ಎಂದು ಕಾಣುವ ಪಾರಂಪರಿಕ ದೃಷ್ಟಿಕೋಣವನ್ನು ಬಲಪಡಿಸಿದೆ ಎಂದು ಶಾ ವಿವರಿಸಿದರು. ದಬ್ಬಾಳಿಕೆ, ನಿರ್ಬಂಧಗಳು ಮತ್ತು ಬಾಹ್ಯ ಆಕ್ರಮಣಗಳ ನಡುವೆಯೂ ವಂದೇ ಮಾತರಂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಂದು ಮನೆಯಲ್ಲಿ ನುಗ್ಗಿ ಜನಮನಗಳನ್ನು ಮುಟ್ಟಿದೆ ಎಂದು ಅವರು ಹೇಳಿದರು.
ವಿದೇಶಿ ಆಕ್ರಮಣಗಳ ಶತಮಾನಗಳ ಪ್ರಭಾವದ ನಡುವೆಯೂ ಭಾರತೀಯ ಸಂಸ್ಕೃತಿಯ ವಿರುದ್ಧ ನಿಂತ ಪ್ರತಿರೋಧದ ಸಂಕೇತವೇ ವಂದೇ ಮಾತರಂ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ, ಬಂಕಿಮ್ ಬಾಬು ರಚಿಸಿದ ಈ ಹಾಡು ದೇಶದಲ್ಲಿ ಅದಮ್ಯ ಆತ್ಮವಿಶ್ವಾಸ ಮತ್ತು ರಾಷ್ಟ್ರೀಯ ಚೇತನೆಯನ್ನು ಜಾಗೃತಗೊಳಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa