
ಬೆಂಗಳೂರು, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ 'ಕ್ವಾಂಟಮ್ ಮೆಟೀರಿಯಲ್ಸ್ ಇನ್ನೋವೇಶನ್ ನೆಟ್‌ವರ್ಕ್' ಸ್ಥಾಪಿಸಲು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಅಡಿಯಲ್ಲಿ 150 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಈ ಯೋಜನೆಯ ಮಹತ್ವವನ್ನು ವಿವರಿಸಿರುವ ಮುಖ್ಯಮಂತ್ರಿಗಳು ವಸ್ತುಗಳ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಒಂದೇ ಕಡೆ ನಡೆಯುವಂತಹ ಸ್ವಾವಲಂಬಿ ಮತ್ತು ಸುಸ್ಥಿರ ಆವಿಷ್ಕಾರದ ಪರಿಸರವನ್ನು ನಿರ್ಮಿಸುವುದು ನಮ್ಮ ಗುರಿ. ಪ್ರಸ್ತಾವಿತ Q-MINt ಕೇವಲ ರಾಜ್ಯಕ್ಕಷ್ಟೇ ಅಲ್ಲದೆ, ಇಡೀ ದೇಶದ ಕ್ವಾಂಟಮ್ ಸಂಶೋಧನೆ ಮತ್ತು ಉದ್ಯಮದ ಅಗತ್ಯಗಳನ್ನು ಪೂರೈಸುವ ರಾಷ್ಟ್ರೀಯ ಸಂಪನ್ಮೂಲವಾಗಿ ಕಾರ್ಯನಿರ್ವಹಿಸಲಿದೆ, ಎಂದು ಪ್ರತಿಪಾದಿಸಿದ್ದಾರೆ.
ಈ ಯೋಜನೆಯು ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಸಹಯೋಗಕ್ಕೆ ಒತ್ತು ನೀಡಲಿದ್ದು, ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ನಿಕಟವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಮ್ಮ ನೇತೃತ್ವದಲ್ಲಿ ಈ ಪ್ರಸ್ತಾವನೆಯನ್ನು ರೂಪಿಸಲಾಗಿದ್ದು, ರಾಜ್ಯದ ಮಹತ್ವಾಕಾಂಕ್ಷೆಯ 'ಕ್ವಾಂಟಮ್ ಸಿಟಿ' ಯೋಜನೆಗೆ ಇದು ಬಹಳ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನಕ್ಕೆ ಮೆಟೀರಿಯಲ್ಸ್‌ಗಳೆ (Materials) ಮೂಲ ಆಧಾರ. ಸಂಶೋಧನೆ ಮತ್ತು ಕೈಗಾರಿಕಾ ಸಾಧ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ಒಂದು 'ಗೇಮ್ ಚೇಂಜರ್' ಆಗಲಿದೆ. ಜಾಗತಿಕ ಕ್ವಾಂಟಮ್ ಕ್ರಾಂತಿಯಲ್ಲಿ ಭಾರತವನ್ನು ಹಾಗೂ ಬೆಂಗಳೂರು ನಗರವನ್ನು ಮುಂಚೂಣಿಯಲ್ಲಿ ಇರಿಸಲು ಇದು ಬಹಳ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa