
ನವದೆಹಲಿ, 9 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಚುನಾವಣಾ ಸುಧಾರಣೆಗಳ ಕುರಿತ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಮತ್ತೆ ಮತ ಕಳವು ದೇಶದ ಎದುರಿನ ಅತ್ಯಂತ ಗಂಭೀರ ಅಪರಾಧ ಎಂದು ಆರೋಪಿಸಿದರು.
“ರಾಷ್ಟ್ರದ ಮೂಲ ರಚನೆ ಮತಗಳ ಮೇಲೆ ನಿಂತಿದೆ. ಚುನಾಯಿತ ಸಂಸ್ಥೆಗಳಾದ ವಿಧಾನ ಸಭೆ, ಸಂಸತ್ತು ಇವುಗಳೂ ಜನರ ಮತದಿಂದಲೇ ಅಸ್ತಿತ್ವಕ್ಕೆ ಬರುತ್ತವೆ ಎಂದು ಹೇಳಿದರು.
ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ “ಮತ ಕಳ್ಳತನ” ಹಾಗೂ “ಸಂಸ್ಥೆಗಳ ವಶಪಡಿಸಿಕೊಳ್ಳುವ” ಹಳೆಯ ಆರೋಪಗಳನ್ನು ಮರು ಒತ್ತಿಹೇಳಿದರು. ಹರಿಯಾಣ ವಿಧಾನಸಭಾ ಚುನಾವಣೆಯ ವೇಳೆ ಮತದಾರರ ಪಟ್ಟಿಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾವು ಹೇಳುವಂತೆ ನಡೆದ ಮತ ಕಳವು ಕುರಿತು ತನಿಖೆ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಹರಿಯಾಣದ ಮತದಾರರ ಪಟ್ಟಿಯಲ್ಲಿ ಬ್ರೆಜಿಲ್ ಮೂಲದ ಮಹಿಳೆಯೊಬ್ಬರ ಹೆಸರು ಮತ್ತು ಫೋಟೋಗಳು ಹಲವು ಬಾರಿ ಮರುಕಳಿಸುತ್ತಿವೆ ಎಂಬ ಉದಾಹರಣೆಯನ್ನು ಅವರು ಮಂಡಿಸಿದರು. ಕಾಂಗ್ರೆಸ್ ಸದಸ್ಯರು ಆ ಮಹಿಳೆಯ ಫೋಟೋ ಸಂಸದರಲ್ಲಿ ಪ್ರದರ್ಶಿಸಿದಾಗ, ಲೋಕಸಭಾ ಸ್ಪೀಕರ್ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದರು.
ಬಿಹಾರದಲ್ಲಿಯೂ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದರೂ 1.02 ಲಕ್ಷ ಮತದಾರರ ಫೋಟೋಗಳು ಒಂದೇ ರೀತಿಯಾಗಿವೆ ಎಂಬ ಗಂಭೀರತೆಯನ್ನು ರಾಹುಲ್ ಗಾಂಧಿ ಸದನದ ಗಮನಕ್ಕೆ ತಂದರು.
ಅದರ ಜೊತೆಗೆ, ಚುನಾವಣಾ ಆಯೋಗದ ವಶಪಡಿಸಿಕೆ ಎಂಬ ತಮ್ಮ ಹಳೆಯ ಆರೋಪವನ್ನೂ ಪುನರುಚ್ಚರಿಸಿದ ಅವರು, ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಬದಲಾವಣೆ ರಾಷ್ಟ್ರದ ಹಿತಕ್ಕೆ ವಿರುದ್ಧ ಎಂದು ಆರೋಪಿಸಿದರು. “ಪ್ರಧಾನಿ, ಓರ್ವ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಸರ್ಕಾರದ ಪರ ಸದಸ್ಯರೇ ಬಹುಮತವಾಗುತ್ತಾರೆ ಎಂದರು.
ಚುನಾವಣಾ ಆಯುಕ್ತರಿಗೆ ಅವರ ಅಧಿಕಾರಾವಧಿಯಲ್ಲಿ ನಡೆದ ದುಷ್ಕೃತ್ಯಗಳಿಗೆ ವಿನಾಯಿತಿ ನೀಡುವಂತೆ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ಮಾಡಿರುವುದನ್ನೂ ಅವರು ತೀವ್ರವಾಗಿ ಟೀಕಿಸಿದ್ದು. “ನಾವು ಅಧಿಕಾರಕ್ಕೆ ಬಂದರೆ, ಈ ವಿನಾಯಿತಿಗಳನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa