


ಬಳ್ಳಾರಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಾನೂನು ಕ್ರಮಗಳನ್ನು ಕಠಿಣವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಬಾಲ್ಯವಿವಾಹಗಳು ಕಾನೂನು ಬಾಹಿರ. ಬಾಲ್ಯವಿವಾಹ ಆದಲ್ಲಿ ಮತ್ತು ಮಾಡಿದಲ್ಲಿ ಅವರ ಮೇಲೆ ಜರುಗಿಸಬಹುದಾದ ಕಠಿಣ ಕಾನೂನು ಕ್ರಮಗಳ ಕುರಿತು ಸಮುದಾಯಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸಂಡೂರು ಭಾಗದ ಚೋರನೂರು, ಬಂಡ್ರಿ, ಮೆಟ್ರಿಕಿ, ವಿಠಲಾಪುರ, ತಾರಾನಗರ ಮತ್ತು ಬಳ್ಳಾರಿ ತಾಲ್ಲೂಕಿನ ಶಿಡಗಿನಮೋಳ ಗ್ರಾಪಂ ವ್ಯಾಪ್ತಿಯಲ್ಲಿ ಸದ್ದಿಲ್ಲದೇ ಹೆಚ್ಚಾಗಿ ಬಾಲ್ಯವಿವಾಹ ಪ್ರಕರಣ ಕಂಡುಬರುತ್ತಿವೆ. ಅದರಲ್ಲೂ ಈ ಭಾಗದಲ್ಲಿ ಗರ್ಭಿಣಿ ಮಹಿಳೆಯರು ಕೇವಲ 35 ಕೆ.ಜಿ ತೂಕ ಇರುವುದು ಕಂಡುಬರುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು, ಜಿಲ್ಲೆಯ ಎಲ್ಲಾ ಉಪವಿಭಾಗಗಳ ಡಿವೈಎಸ್ಪಿ ಗಳೊಂದಿಗೆ ಸಭೆ ನಡೆಸಬೇಕು ಹಾಗೂ ಗ್ರಾಮಗಳಲ್ಲಿನ ದೇವಸ್ಥಾನ, ಚರ್ಚ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಡೆಯುವ ಮದುವೆ, ಈ ಕಾರ್ಯಕ್ರಮಕ್ಕೆ ಶ್ಯಾಮಿಯಾನ ಪರಿಕರ ವಿತರಿಸುವವರು ಒಳಗೊಂಡು ಮದುವೆ ಸಮಾರಂಭದ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರ ಆದೇಶ ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
*ಕ್ರೈಸ್ ವಸತಿ ಶಾಲೆಗಳಲ್ಲಿ 1098 ಅಳವಡಿಸಿ:*
ಜಿಲ್ಲೆಯ ಎಲ್ಲಾ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ಕರೆಮಾಡಿ ಮಾತನಾಡಲು ಸ್ಮಾರ್ಟ್ ಕಾರ್ಡ್ ಬಳಸಲಾಗುತ್ತಿದ್ದು, ಅದರಲ್ಲಿ ಕೇವಲ ವಿದ್ಯಾರ್ಥಿಯ ಪೆÇೀಷಕರ ಮೊಬೈಲ್ ಸಂಖ್ಯೆ ನಮೂದಾಗಿರುತ್ತದೆ. ಇದರ ಜೊತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಹ ನಮೂದು ಮಾಡಬೇಕು. ಇದರಿಂದ ಹಂಚಿಕೊಳ್ಳಲಾಗದ ಕೆಲವು ಘಟನೆಗಳನ್ನು ಕರೆ ಮಾಡಿ ಮಾಹಿತಿ ನೀಡಲು ಸಹಾಯವಾಗಲಿದೆ. ಹಾಗಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಪ್ರತಿ ಶಾಲೆಗಳ ಮುತುವರ್ಜಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಿದ್ದು, ಪ್ರತಿಯೊಬ್ಬ ಅಧಿಕಾರಿಯೂ ಅತ್ಯುನ್ನತ ಪದವಿ ಪಡೆದಿದ್ದಾರೆ. ತಿಂಗಳಲ್ಲಿ 2 ಬಾರಿ ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಕುರಿತು ಪರಿವೀಕ್ಷಣೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ಬೋಧನೆ ಮಾಡಬೇಕು. ವಾಟ್ಸ್ ಆಪ್ ಗುಂಪು ರಚಿಸಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಜಿಪಂ ಸಿಇಒ ಅವರು ತಿಳಿಸಿದರು.
ಜಿಲ್ಲಾಧಿಕಾರಿಯವರು ಮಾತನಾಡಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರು, ಬಾಣಂತಿ ಮಹಿಳೆಯರಿಗೆ ತಲುಪಬೇಕಾದ ಅನುದಾನ ಗುರಿ ನಿಗದಿತ ವೇಳೆಗೆ ಅವರಿಗೆ ತಲುಪಿಸಬೇಕು. ಅಧಿಕಾರಿಗಳು ತಮ್ಮಲ್ಲಿಯೇ ಇಟ್ಟುಕೊಂಡಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಡಿಪಿಒ ಅಧಿಕಾರಿಗಳಿಗೆ ಸೂಚಿಸಿದ ಅವರು, ಹಣ ಪಾವತಿ ಮಾಡಿರುವ ಕುರಿತು ವಾರದೊಳಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಸೇರಿದಂತೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್ ಜಿಒ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್