

ಕೊಪ್ಪಳ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಕೃತಿ ನಮಗೆ ಬದುಕಲಿಕ್ಕಾಗಿ ಎಲ್ಲವನ್ನೂ ಕೊಟ್ಟಿದೆ. ಅದನ್ನು ಹಾಳು ಮಾಡಿದರೆ ನಮ್ಮ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತದೆ, ಈಗ ಗಾಳಿಯ ಶುದ್ಧತೆ ಕುರಿತ ವರದಿಯೊಂದು ಹರಿದಾಡುತ್ತಿರುವದು ಹಾಸ್ಯಾಸ್ಪದ ಎಂದು ನಿವೃತ್ತ ಪ್ರಾಚಾರ್ಯರಾದ ಡಾ. ವಿ. ಬಿ. ರಡ್ಡೇರ್ ಹೇಳಿದರು.
ಈ ಕಂಪನಿ ಕಾರ್ಪೊರೇಟರಗಳು ಏನು ಬೇಕಾದರೂ ಮಾಡಿಸುತ್ತಾರೆ, ದೇಶದಲ್ಲಿ ಅನೇಕ ಅದ್ಭುತ ಸ್ವಚ್ಛ, ಅರಣ್ಯ, ಕಾರ್ಖಾನೆಗಳೇ ಇಲ್ಲದ ಜಿಲ್ಲೆ ನಗರಗಳು ಇದ್ದು ಅವೆಲ್ಲವು ಮೀರಿ ಕಾರ್ಖಾನೆಗಳ ಹಬ್ ಆಗಿರುವ ಕೊಪ್ಪಳ ಶುದ್ಧ ಗಾಳಿ ನಗರದ ಬಿರುದು ಕೇವಲ ಸರಕಾರ, ನ್ಯಾಯಾಲಯ ಮನವೊಲಿಸುವ ಪ್ರಯತ್ನ ಎಂದರು.
ಕಾರ್ಖಾನೆಗಳು ಮಾಡುತ್ತಿರುವ ಹಾನಿಗೆ ಪರಿಸರವೇ ಪ್ರತಿಕಾರ ತೀರಿಸಿಕೊಳ್ಳುತ್ತದೆ. ಕೊಪ್ಪಳದಲ್ಲಿ ಒಂದೇ ಕಡೆ ಕೇಂದ್ರೀಕರಿಸಿ ಸ್ಥಾಪಿಸಿದ ಕಾರ್ಖಾನೆಗಳಿಂದ ಧಾರಣ ಸಾಮರ್ಥ್ಯ ಕಳೆದುಕೊಂಡಿದೆ. ಇದು ಸರಕಾರಕ್ಕೆ ಗೊತ್ತಿದ್ದರೂ ಮತ್ತೆ ಇಲ್ಲಿ ಬಂಡವಾಳದ ಆಕರ್ಷಣೆ ಮಾಡುವುದು, ಕಾರ್ಖಾನೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವುದು, ಕೇಂದ್ರ, ರಾಜ್ಯದ ಮೇಲೆ ರಾಜ್ಯ, ಕೇಂದ್ರದ ಮೇಲೆ ಕೆಸರೆರಚಿಕೊಳ್ಳುವುದು ನಡೆದಿದೆ. ಇಲ್ಲಿ ಜನರ ಆರೋಗ್ಯ, ಕೃಷಿ, ಪಶು ಸಂಗೋಪನೆ, ಕುಕ್ಕಟೋದ್ಯಮ ಎಲ್ಲವನ್ನು ನಾಶ ಮಾಡಲಾಗಿದೆ. ಈ ಕಾರ್ಖಾನೆಗಳ ಮಾಲೀಕರ ದಾಹ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತದೆ. ಪಕ್ಕದ ಚೈನಾ ದೇಶ ಏನೆಲ್ಲಾ ಅಭಿವೃದ್ಧಿ ಸಾಧಿಸಿದೆಯಾದರೂ ಪ್ರಕೃತಿಯನ್ನು ದೇವರಂತೆ ಪೂಜಿಸುತ್ತಾ, ಮಾಲಿನ್ಯವಾಗದಂತೆ ನೋಡಿಕೊಳ್ಳುತ್ತದೆ. ರೈತರನ್ನು ಕಡೆಗಣಿಸುವ ಸರ್ಕಾರಗಳು ಇತ್ತಕಡೆ ಗಮನ ಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆ ಆಗಬೇಕು ಎಂದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಯಿಂದ ನಗರಸಭೆ ಮುಂದೆ ನಡೆಸುತ್ತಿರುವ 40ನೇ ದಿನದ ಅನಿರ್ದಿಷ್ಟಾವಧಿ ಧರಣಿಯನ್ನು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಬೆಂಬಲಿಸಿತು.
ಭಾರತೀಯ ಕ್ರಾಂತಿಕಾರಿ ಕಿಸಾನ ಸೇನಾ ರಾಜ್ಯ ಕಾರ್ಯದರ್ಶಿ ಹನುಮೇಶ ಶಾಖಾಪುರ ಮಾತನಾಡಿ, ಫೆಬ್ರವರಿಯಲ್ಲಿ ನಡೆಸಿದ ಗವಿಶ್ರೀಗಳ ನೇತೃತ್ವದ ಬಂದ್ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ಬಾಧಿತ ಹಳ್ಳಿಗಳ ಕೃಷಿ ರಕ್ಷಿಸುವಂತೆ, ಜನ-ಜಾನುವಾರು ರಕ್ಷಣೆ ಮಾಡುವಂತೆ ಕೋರಿದ್ದೇವೆ. ಆದರೆ ಇದುವರೆಗೆ ಸರ್ಕಾರ ಇದರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ವಿಫಲವಾಗಿದೆ. ಇದು ಲಕ್ಷಗಟ್ಟಲೆ ಜನರ ಸಮಸ್ಯೆ ಎಂದು ಗೊತ್ತಿದ್ದರೂ ಸರ್ಕಾರ ಕಡೆಗಣನೆ ಮಾಡುತ್ತಿರುವುದು ನಮ್ಮ ಸೇನಾ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಹೋರಾಟದ ಕ್ರಾಂತಿಕಾರಿ ಬದಲಾವಣೆಗಾಗಿ ರೈತ ಸಂಘ ಎಂತಹ ಸಂಘರ್ಷಕ್ಕಿಳಿಯಲು ಸಿದ್ಧವಿದೆ ಎಂದರು.
ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಸಿ.ವಿ. ಜಡಿಯವರ್, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಬಸವರಾಜ ಶೀಲವಂತರ, ಶರಣು ಗಡ್ಡಿ, ಕಿಸಾನ್ ಸೇನಾದ ದೊಡ್ಡ ಪರಮಣ್ಣ, ಶಿವಪ್ಪ ದೊಡ್ಡಮನಿ, ಶರಣಪ್ಪ ಚನ್ನಪ್ಪನಹಳ್ಳಿ, ನೀಲಪ್ಪ ಮೇಟಿ, ಸಣ್ಣ ಮಲ್ಲಯ್ಯ, ದೊಡ್ಡನಗೌಡ ಮಾಲಿಪಾಟೀಲ್, ಶಿವಪುತ್ರಪ್ಪ ಚಿಗರಿ, ಮಾರುತೆಪ್ಪ ಚನ್ನಳ್ಳಿ, ಮಂಜಪ್ಪ ಕುರಿ ಅಭಿಜಿತ್ ಅಂಡಗಿ, ಮಖಬೂಲ್ ರಾಯಚೂರು, ಗಾಳೆಪ್ಪ ಮುಂಗೋಲಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವಪ್ಪ ಹಡಪದ, ಬಸವರಾಜ ನರೇಗಲ್ ಮಹಾಂತೇಶ ಕೊತಬಾಳ ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್