ಸರಕಾರದ ಮಟ್ಟಿನ ರಜೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
ಬೆಂಗಳೂರು, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ವೇತನಸಹಿತ ಮುಟ್ಟಿನ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲಿನ ಪ್ರ
High court


ಬೆಂಗಳೂರು, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ವೇತನಸಹಿತ ಮುಟ್ಟಿನ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲಿನ ಪ್ರಾಥಮಿಕ ವಿಚಾರಣೆಯಲ್ಲಿ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.

ಸರ್ಕಾರವು ನವೆಂಬರ್ 12ರಂದು ಕಾರ್ಮಿಕ ಇಲಾಖೆಯ ಮೂಲಕ ಅಧಿಸೂಚನೆ ಹೊರಡಿಸಿ, ಕಾರ್ಖಾನೆ ಕಾಯ್ದೆ, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಹಾಗೂ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯ ವ್ಯಾಪ್ತಿಗೆ ಬರುವ ಎಲ್ಲಾ ಸಂಸ್ಥೆಗಳು ಪ್ರತಿ ತಿಂಗಳು ಒಂದು ದಿನ ವೇತನಸಹಿತ ಮುಟ್ಟಿನ ರಜೆಯನ್ನು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದು ನಿರ್ದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದ್ದು, ರಜೆ ನೀತಿಗಳು ಸಂಸ್ಥೆಗಳ ಆಂತರಿಕ ಆಡಳಿತಾತ್ಮಕ ವಿಷಯವಾಗಿದ್ದು, ಸರ್ಕಾರಕ್ಕೆ ಇಂಥ ಕಡ್ಡಾಯ ವಿಧಿಸಲು ಕಾನೂನು ಹಕ್ಕಿಲ್ಲ ಎಂಬುದಾಗಿ ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ ವಾದ ಮಂಡಿಸಿದರು. ಸರ್ಕಾರದ ಆದೇಶ ಏಕಪಕ್ಷೀಯವಾಗಿದ್ದು, ಜಾರಿಗೆ ಮುನ್ನ ಸಂಬಂಧಿತ ಸಂಘಟನೆಗಳ ಅಭಿಪ್ರಾಯವನ್ನು ಪಡೆದುಕೊಳ್ಳಲಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ಏಕಸದಸ್ಯ ಪೀಠ, “ಕಾಯ್ದೆಯಲ್ಲಿ ಪ್ರಸ್ತಾಪವಿಲ್ಲದ ನಿಯಮವನ್ನು ಸರ್ಕಾರ ಅಧಿಸೂಚನೆಯ ಮೂಲಕ ಜಾರಿ ಮಾಡಲು ಸಾಧ್ಯವೇ?” ಎಂಬ ಪ್ರಶ್ನೆಯನ್ನು ಎತ್ತಿ, ಸರ್ಕಾರದ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಮುಂದಿನ ವಿಚಾರಣೆವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರಲಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಸರ್ಕಾರ ಅರ್ಜಿ ಸಲ್ಲಿಸಲು ಸ್ವತಂತ್ರವಾಗಿದೆ ಎಂದು ಪೀಠ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande