



ಕೊಪ್ಪಳ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ, ತಾಲೂಕು ಆಡಳಿತ ಯಲಬುರ್ಗಾ ಮತ್ತು ಹಿರೇಅರಳಿಹಳ್ಳಿ ಗ್ರಾಮ ಪಂಚಾಯತ್‌ಗಳ ಸಂಯುಕ್ತಾಶ್ರಯದಲ್ಲಿ ಹಿರೇಅರಳಿಹಳ್ಳಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೆಜು ಆವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು, ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ದೇಶವು 1992 ಡಿಸೆಂಬರ್ 11 ರಂದು ಅನುಮೋದಿಸಿದ್ದು, ದೇಶದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಬದುಕುವ, ಅಭಿವೃದ್ಧಿ ಮತ್ತು ವಿಕಾಸ ಹೊಂದುವ, ಶೋಷಣೆಯ ವಿರುದ್ಧ ಸಂರಕ್ಷಣೆಯ ಹಾಗೂ ಭಾಗವಹಿಸುವ ಹಕ್ಕುಗಳನ್ನು ಅನುಭವಿಸುವಂತಹ ಮತ್ತು ಮಕ್ಕಳಸ್ನೇಹಿ ವಾತಾವರಣ ನಿರ್ಮಿಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು-2030 ನ್ನು ಒಪ್ಪಿಕೊಂಡಿದ್ದು, ಮಕ್ಕಳ ಆರೋಗ್ಯ, ರಕ್ಷಣೆ, ಶಿಕ್ಷಣ, ಅಭಿವೃದ್ಧಿ ಸಾಧಿಸಲು ಮತ್ತು ಹಸಿವು, ತಾರತಮ್ಯ ಮತ್ತು ಶೋಷಣೆ ಕೊನೆಗಾಣಿಸುವುದಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಈ ಉದ್ದೇಶದ ಈಡೇರಿಕೆಗಾಗಿ ಮಕ್ಕಳಿಗೆ ಸಂಬ0ಧಿಸಿದ0ತೆ ಹಲವಾರು ನೀತಿಗಳು, ಕಾನೂನುಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕ ಸರಕಾರವು ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳು ಭಾಗವಹಿಸುವ ಹಕ್ಕುಗಳನ್ನು ಖಾತ್ರಿಪಡಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೂಲಕ “ಮಕ್ಕಳಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ”ವನ್ನು ಆರಂಭಿಸಿದೆ. ಈ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನವೆಂಬರ್-2025 ರಿಂದ ಜನವರಿ-2026 ರವರೆಗೆ 10 ವಾರಗಳ ಕಾಲ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸುತ್ತಿದೆ. ಮಕ್ಕಳಿಗಾಗಿ ಗ್ರಾಮ ಪಂಚಾಯತ್‌ನ ಒಟ್ಟು ಅನುದಾನದಲ್ಲಿ ಶೇ.5 ರಷ್ಟು ಅನುದಾನವನ್ನು ಮೀಸಲಿಟ್ಟು, ಸ್ಥಳೀಯವಾಗಿಯೇ ಅಗತ್ಯವಾದ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶವನ್ನು ಕಲ್ಪಿಸಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಮಕ್ಕಳ ಅವಶ್ಯಕತೆಗಳು, ಬೇಡಿಕೆಗಳಿಗೆ ಸ್ಪಂದಿಸಿ ಅವಶ್ಯವಿರುವ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ ಮತ್ತು ಆಡಳಿತದಲ್ಲಿ ಮಕ್ಕಳನ್ನು ಸಹ ಒಳಗೊಳ್ಳುವಿಕೆಯನ್ನು ಖಾತ್ರಿ ಪಡಿಸುವುದು ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳ ಮುಖ್ಯ ಉದ್ದೇಶ. ಈ ಮಕ್ಕಳ ಹಕ್ಕುಗಳ ಗ್ರಾಮಸಭೆಗಳಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಕ್ಕಳನ್ನು ಅಥವಾ ಮಕ್ಕಳ ಪ್ರತಿನಿಧಿಗಳು, ಆ ಗ್ರಾಮ ಪಂಚಾಯತ್‌ನ ಜನಪ್ರತಿನಿಧಿಗಳು, ಭಾಗೀದಾರ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಮಕ್ಕಳಿಂದ, ಮಕ್ಕಳಿಗಾಗಿ ಮತ್ತು ಮಕ್ಕಳಿಗೋಸ್ಕರ ಆಯೋಜಿಸಿರುವ ಈ ಗ್ರಾಮಸಭೆಯಲ್ಲಿ ತಾವುಗಳೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಹಾಗೂ ಮಕ್ಕಳ ಮೇಲಿನ ಹಲ್ಲೆ, ದೌರ್ಜನ್ಯ, ಕಿರುಕುಳ ಕಂಡುಬ0ದಲ್ಲಿ ಅಥವಾ ಮಕ್ಕಳು ಸಂಕಷ್ಟಕರ ಪರಸ್ಥಿತಿಯಲ್ಲಿ ಸಿಲುಕಿರುವುದು, ಸಿಲುಕುವ ಸಾಧ್ಯತೆ ಇದ್ದಲ್ಲಿ ಮಕ್ಕಳ ಸಹಾಯವಾಣಿ-1098 ಅಥವಾ ತುರ್ತು ಸಹಾಯವಾಣಿ-112ಗೆ ಕರೆ ಮಾಡಿ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ(ಸಾಂಸ್ಥಿಕ) ರವಿಕುಮಾರ ಪವಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ವ್ಯಾಪಕವಾದ ಜಾಗೃತಿಯನ್ನು ಮೂಡಿಸುತ್ತಿದ್ದಾಗ್ಯೂ ಸಹ ಜಿಲ್ಲೆಯಲ್ಲಿ ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳನ್ನು ತೊರೆದು ಹೋಗುತ್ತಿರುವ ಪ್ರಕರಣಗಳು ಕಂಡುಬರುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ. ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಲೈಂಗಿಕ ಆಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ಕ್ಕೆ ತಿದ್ದುಪಡಿಯನ್ನು ತಂದಿದ್ದು, ಅದರಂತೆ ಮಕ್ಕಳ ಮೇಲಿನ ಲೈಂಗಿಕ ಹಲ್ಲೆಗೆ ಕನಿಷ್ಟ 20 ವರ್ಷಗಳಿಂದ ಆಜೀವ ಜೈಲು ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಬಹುದಾಗಿದೆ.
ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ದೌರ್ಜನ್ಯ, ಕಿರುಕುಳಕ್ಕೆ ಸಹಕರಿಸುವುದು, ಪ್ರೋತ್ಸಾಹಿಸುವುದು ಸಹ ಅಪರಾಧವಾಗಿದ್ದು, ಇದಕ್ಕೆ ಅರ್ಧ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016 ರನ್ವಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾದ ವಯಸ್ಕ ಪುರುಷ, ಮದುವೆಯನ್ನು ಮಾಡಿದವರು, ನೆರವೇರಿಸಿದವರು, ಹಾಗೂ ಪ್ರೋತ್ಸಾಹಿಸಿದವರಿಗೂ ಸೇರಿದಂತೆ ಭಾಗವಹಿಸಿದವರಿಗೆ 2 ವರ್ಷ ಜೈಲು ಶಿಕ್ಷೆ ತಪ್ಪಿದ್ದಲ್ಲ. ಅಲ್ಲದೇ ಪ್ರೀತಿ ಪ್ರೇಮದ ಹೆಸರಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಅಥವಾ ಪತ್ನಿಯೊಂದಿಗಿನ ದೈಹಿಕ ಸಂಪರ್ಕವು ಸಹ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.
ಹಿರೇಅರಳಿಹಳ್ಳಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶಾಂತಮ್ಮ ಹನುಮಪ್ಪ ವಾದಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಕುಷ್ಟಗಿ ಕೆ.ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕ ಸಣ್ಣ ಕುಂಟೆಪ್ಪ, ಹಿರೇಅರಳಿಹಳ್ಳಿಯ ಸಮೂಹ ಸಂಪನ್ಮೂಲ ವ್ಯಕ್ತಿ ಹುಸೇನ ಭಾಗವಾನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರು, ಅಂಗನವಾಡಿ ಮೇಲ್ವಿಚಾರಕಿ ಗಂಗಾ, ಹಿರೇಅರಳಿಹಳ್ಳಿ ಗ್ರಾಮ ಪಂಚಾಯತ್‌ನ ಸದಸ್ಯರುಗಳಾದ ತೀರ್ಥಪ್ಪ ಭಜಂತ್ರಿ, ಲಕ್ಷಿದೇವಿ ದೇವಲಾಪುರ, ಶರಣಪ್ಪ ಹಳ್ಳಿಗುಡಿ, ದೇವಮ್ಮ, ಮಹೇಶ ಬಡಿಗೇರ, ವೆಂಕಟೇಶಗೌಡ ಪೊಲೀಸ್ ಪಾಟೀಲ್, ರವಿಚಂದ್ರಗೌಡ ಭಾವಿಕಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ವಜ್ರಬಂಡಿಯ ಆರೋಗ್ಯಾಧಿಕಾರಿ ಬಸವರಾಜ ಇಲ್ಲಾಳ, ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾರ್ಚಾರ್ಯರಾದ ಹನುಮಂತಪ್ಪಗೌಡ ಮತ್ತು ಉಪನ್ಯಾಸಕರು, ಸರಕಾರಿ ಪ್ರೌಢ ಶಾಲೆ, ಹಿರೇ ಅರಳಿಹಳ್ಳಿಯ ಮುಖ್ಯೋಪಾಧ್ಯಾಯರಾದ ಕಲ್ಲಯ್ಯ ಕೋಚಲಾಪುರಮಠ ಮತ್ತು ಶಿಕ್ಷಕರು ಹಾಗೂ ವಿವಿಧ ಶಾಲೆ ಮತ್ತು ಕಾಲೇಜುಗಳ ಮಕ್ಕಳು ಭಾಗವಹಿಸಿದ್ದರು.
ಹಿರೇಅರಳಿಹಳ್ಳಿ ಗ್ರಾಮ ಪಂಚಾಯತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಯರಗೇರಾ ರವರು ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ರವಿ ಬಡಿಗೇರ ರವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್