
ಕೋಲಾರ, ೦೯ ಡಿಸೆಂಬರ್ (ಹಿ.ಸ) :
ಆ್ಯಂಕರ್ : ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ `ಕರ್ನಾಟಕ ದ್ವೇಷಭಾಷಣ ವಿಧೇಯಕ-೨೦೨೫' ಹಿಂದೂ ಧಾರ್ಮಿಕ ಆಚರಣೆ ಮತ್ತು ನಾಯಕತ್ವದ ಧ್ವನಿಯನ್ನು ಅಡಗಿಸುವ ದುರುದ್ದೇಶದಿಂದ ಕೂಡಿದ್ದು, ಈ ಕಾಯಿದೆ ಜಾರಿಗೆ ತರಬಾರದು ಎಂದು ಆಗ್ರಹಿಸಿ ಶ್ರೀರಾಮಸೇನೆಯಿಂದ ಕೋಲಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಈ ಮಸೂದೆಯಿಂದ ಹಿಂದೂ ಮುಖಂಡರು, ಮಠಾಧೀಶರು, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಹಿಂದೂ ನಾಯಕರನ್ನು ಕಾನೂನಿನ ಮೂಲಕ ಕಟ್ಟಿ ಹಾಗಿ ದುರ್ವಿನಿಯೋಗವಾಗುವ ಸಾಧ್ಯತೆ ಇದೆ. ಹನುಮ ಜಯಂತಿ, ದತ್ತಜಯಂತಿ, ಶೋಭಾಯಾತ್ರೆ, ಸಂಕೀರ್ತನೆ, ಧಾರ್ಮಿಕ ಜಾಗೃತಿ ಭಾಷಣಗಳನ್ನು ದ್ವೇಷ ಭಾಷಣ ಎಮದು ತಪ್ಪಾಗಿ ಅರ್ಥೈಸಿ ಜನರ ಧ್ವನಿಯನ್ನು ಅಡಗಿಸುವ ದುರುದ್ದೇಶದಿಂದ ಕೂಡಿದೆ ಎಂದು ಕಿಡಿಕಾರಿದರು.
ಮಸೂದೆ ಸಂವಿಧಾನದ ಆರ್ಟಿಕಲ್ ೧೯(೧)(ಎ) ಮಾತಿನ ಸ್ವಾತಂತ್ರö್ಯ, ಆರ್ಟಿಕಲ್-೨೫ ಧಾರ್ಮಿಕ ಆಚರಣೆಯ ಹಕ್ಕಿನ ದಮನದ ಉದ್ದೇಶ ಹೊಂದಿದೆ ಎಂದು ಆರೋಪಸಿದ ಅವರು, ಈ ಮಸೂದೆ ನಿಷ್ಪಕ್ಷಪಾತವಾಗಿಲ್ಲ, ಹಿಂದೂ ಪರಂಪತೆ, ಮೌಲ್ಯ, ಹಿಂದೂಗಲ ಹಬ್ಬಗಳು, ಭಾಷಣಗಳ ಮೇಲೆ ಮತ್ರ ವಾಸ್ತವಿಕ ಪರಿಣಾಮ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷ, ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸುವ ಅಸಮಾಧಾನಿಗಳು, ಸಂಘಟಿತರ ಗುಂಪುಗಳ ಮೇಲೆ ರಾಜಕೀಯ ಕೇಸುಗಳನ್ನು ಹಾಕುವ ದುರುದ್ದೇಶದಿಂದ ಕೂಡಿದೆ, ಹಬ್ಬಗಳಲ್ಲಿ ಭಕ್ತಿ ಘೋಷಣೆಗಳು, ಧರ್ಮರಕ್ಷಣೆಯ ಭಾಷಣಗಳು, ಸಾಂಸ್ಕೃತಿಕಜಾಗೃತಿ ಎಲ್ಲವೂ ಕಾನೂನು ವಿರೋಧಿ ಎಂದು ಬಣ್ಣಿಸುವ ದುರುದ್ದೇಶ ಈ ಕಾಯಿದೆ ಹೊಂದಿದೆ ಎಂದು ಕಿಡಿಕಾರಿದರು.
ಈ ಮಸೂದೆ ಜಾರಿಗೆ ಬಂದರೆ ಹಿಂದೂ ಸಮಾಜದ ಧಾರ್ಮಿಕ ಸ್ವಾತಂತ್ರö್ಯ ಮತ್ತು ಜಾಗೃತಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮವಾಗಲಿದೆ, ಹಿಂದೂ ಮುಖಂಡರ ಮೇಲೆ ವಿನಾಕಾರಣ ಎಫ್‌ಐಆರ್ ದಾಖಲಿಸಲು ದುರುಪಯೋಗಪಡಿಸಿಕೊಳ್ಳುವ ಅವಕಾಶವೇ ಹೆಚ್ಚಿರುವುದರಿಂದ ಕೂಡಲೇ ಈ ಮಸೂದೆಯನ್ನುತಡೆಯಲು ಒತ್ತಾಯಿಸಿದರು.
ರಾಜ್ಯಪಾಲರು ಈ ಮಸೂದೆಯನ್ನು ಅನುಮೋದಿಸದೇ ಧಾರ್ಮಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವಾಪಸ್ಸು ಕಳುಹಿಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ವಿಭಾಗೀಯ ಅಧ್ಯಕ್ಷ ರಮೇಶ್‌ರಾಜ್ ಅರಸ್, ಜಿಲ್ಲಾಧ್ಯಕ್ಷ ವೆಂಕಟಸ್ವಾಮಿ(ಚಿನ್ನಪ್ಪಿ), ತಾಲ್ಲೂಕು ಅಧ್ಯಕ್ಷ ನಾಗೇಂದ್ರ ಯಾದವ್, ನಗರ ಅಧ್ಯಕ್ಷ ಅರುಣ್ ಮತ್ತಿತರರಿದ್ದರು.
ಚಿತ್ರ : ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ `ಕರ್ನಾಟಕ ದ್ವೇಷಭಾಷಣ ವಿಧೇಯಕ' ಜಾರಿಗೆ ತರಬಾರದು ಎಂದು ಒತ್ತಾಯಿಸಿ ಶ್ರೀರಾಮಸೇನೆಯಿಂದ ಕೋಲಾರ ತಹಸಿಲ್ದಾರ್ ಕಚೇರಿಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್