

ರಾಯಚೂರು, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಾರ್ವಜನಿಕರಿಗೆ ಸುಗಮ ಸಾರಿಗೆ ಕಲ್ಪಿಸುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ)ದ ರಸ್ತೆಗಳು ಸೇರಿದಂತೆ, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿ0ಗ್ ಹಾಗೂ ಇನ್ನೀತರ ಇಲಾಖೆಗಳ ಅಧೀನದ ಎಲ್ಲ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಕೂಡಲೇ ಗುರುತಿಸಿ ಯುದ್ದೋಪಾದಿಯಲ್ಲಿ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಎಲ್ಲಾ ಕಡೆಗಿನ ರಸ್ತೆಗಳಲ್ಲಿ ಹಾಕಿರುವ ಹಂಪ್ಸಗಳು ಕಾಣುವುದೇ ಇಲ್ಲ. ಇದರಿಂದಾಗಿ ಹೆಚ್ಚಾಗಿ ದ್ವಿಚಕ್ರ ವಾಹನಗಳು ಮೇಲೆ ಪುಟಿದು ಅಪಘಾತಕ್ಕೀಡಾಗುತ್ತವೆ. ಈ ಬಗ್ಗೆ ಕೂಡಲೇ ಗಮನ ಹರಿಸಿ ಅವೈಜ್ಞಾನಿಕವಾಗಿ ಹಾಕಿದ ಎಲ್ಲ ಹಂಪ್ಸಗಳನ್ನು ಸರಿಪಡಿಸಬೇಕು. ಕಡ್ಡಾಯವಾಗಿ ಎರಡೂ ಬದಿಯಲ್ಲಿ ಬಿಳಿಪಟ್ಟಿ ಅಳವಡಿಸಿ ಹಂಪ್ಸ್ ಕಾಣುವ ಹಾಗೆ ಸುರಕ್ಷತಾ ಕ್ರಮಕ್ಕೆ ಕೂಡಲೇ ಮುಂದಾಗಬೇಕು. ಗ್ರಾಮೀಣ, ತಾಲೂಕು, ಜಿಲ್ಲಾ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಅಪಘಾತ ರಹಿತ ಸಂಚಾರಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಂತಾರಾಜ್ಯ ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಶಕ್ತಿನಗರ ಬಳಿಯಲ್ಲಿನ ಬೈಪಾಸನಲ್ಲಿನ ಅಪಘಾತ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಬಗ್ಗೆ ತುರ್ತಾಗಿ ಗಮನ ಹರಿಸಿ, ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿನ ಒತ್ತುವರಿ ರಸ್ತೆಯನ್ನು, ವಶಕ್ಕೆ ಪಡೆದು ಡಾಂಬರೀಕರಣಗೊಳಿಸಿ ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಶಾಲಾ ವಾಹನಗಳ ಪಿಟ್ನೆಸ್ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಾಯಚೂರು ಜಿಲ್ಲೆಯಲ್ಲಿ 444 ವಾಹನಗಳಿಗೆ ಫಿಟನೆಸ್ ಇರುತ್ತವೆ. ಇನ್ನುಳಿದ 175 ವಾಹನಗಳ ಪಿಟನೆಸ್ ಮುಗಿದಿರುತ್ತದೆ. ಈ ವಾಹನಗಳಿಗೆ ಪಿಟನೆಸ್ ಮಾಡಲು ನೊಟೀಸ್ ಜಾರಿ ಮಾಡಲಾಗಿದೆ ಎಂದು ಆರ್‌ಟಿಓ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳು ಎಲ್ಲ ರೀತಿಯಿಂದಲೂ ಸುಭದ್ರವಾಗಿರಬೇಕು. ಈ ಬಗ್ಗೆ ಆಯಾ ಶಾಲೆಗಳ ಮಾಲೀಕರು ಗಮನ ಹರಿಸಬೇಕು. ಪಿಟನೆಸ್ ಪ್ರಮಾಣಪತ್ರ ಕಡ್ಡಾಯ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಜಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ನಗರ ಮತ್ತು ಜಿಲ್ಲಾ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧೀನದ ರಸ್ತೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ರಸ್ತೆಗಳ ನಿರ್ವಹಣೆ ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ ತಿಳಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
*ಹೇಲ್ಮೆಟ ಬಳಕೆ:* ರಾಯಚೂರು ಜಿಲ್ಲೆಯಲ್ಲಿ ಹೇಲ್ಮೆಟ ಬಳಕೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೀವನ ತುಂಬಾ ಮುಖ್ಯ. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಂಡ ಅನೇಕ ಪ್ರಕರಣಗಳ ಬಗ್ಗೆ ಜನತೆಗೆ ತಿಳಿವಳಿಕೆ ನೀಡಿ ಹೆಲ್ಮೇಟ ಧರಿಸಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿ ತಿಳಿವಳಿಕೆ ನೀಡುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
*ರಾಯಚೂರು ಸಿಟಿಯಲ್ಲಿ ನಿರ್ವಹಣೆ:* ಹಲವು ವರ್ಷಗಳ ನಂತರ ಮೊದಲ ಬಾರಿಗೆ ರಾಯಚೂರು ಮಹಾನಗರ ಪಾಲಿಕೆಯು ರಸ್ತೆ ನಿರ್ವಹಣಾ ಟೆಂಡರ್ ಕರೆದಿದ್ದು, ರಾಯಚೂರು ಸಿಟಿ ವ್ಯಾಪ್ತಿಯ ರಸ್ತೆಗಳಲ್ಲಿನ ತಗ್ಗು ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ರಸ್ತೆ ಸರಿಪಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದಾಗ್ಯೂ ನಗರದಲ್ಲಿನ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಹಾಗೆ ಇವೆ ಎಂದು ದೂರುಗಳು ಬಂದಲ್ಲಿ ಯಾವುದೇ ಕೆಲಸವನ್ನು ಅನುಮೋದಿಸಲಾಗುವುದಿಲ್ಲ ಎಂದು ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದ್ದಾಗಿ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದರು.
*ಅಪಘಾತ ಪ್ರಕರಣಗಳು:* ರಾಯಚೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಇತರೆ ರಸ್ತೆಗಳಲ್ಲಿ ಮಾರಣಾಂತಿಕ ಅಪಘಾತ ಪ್ರಕರಣಗಳು 2022ರಲ್ಲಿ 300, 2023ರಲ್ಲಿ 264, 2024ರಲ್ಲಿ 297, 2025ರ ಡಿಸೆಂಬರ್ 5ರವರೆಗೆ 254 ಸಂಭವಿಸಿ 1177 ಜನರು ಮೃತಪಟ್ಟಿದ್ದು, 2574 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ವೆಂಕಟೇಶ ಗಳಗ, ಪೊಲೀಸ್ ಇಲಾಖೆ, ಆರ್ ಟಿಓ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್