
ಬಳ್ಳಾರಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಕರ್ನಾಟಕ ಘಟಕದ ನೇತೃತ್ವದಲ್ಲಿ ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ‘ಬೆಳಗಾವಿ ಚಲೋ’ ಹೋರಾಟ ಡಿಸೆಂಬರ್ 9 ರ ಮಂಗಳವಾರ ನಡೆಯಲಿದೆ.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ ಎ. ದೇವದಾಸ್ ಮತ್ತು ಡಾ. ಪ್ರಮೋದ್. ಎನ್ ಅವರು ಸುದ್ದಿಗಾರರಿಗೆ ಸೋಮವಾರ ಈ ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದ 43 ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ 25 ರಿಂದ 30 ವರ್ಷಗಳಿಂದ ಗುತ್ತಿಗೆ-ಹೊರಗುತ್ತಿಗೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷಕ್ಕೂ ಅಧಿಕ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಡಿಸೆಂಬರ್ 9ರ ಮಂಗಳವಾರ ‘ಬೆಳಗಾವಿ ಚಲೋ’ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆಯಲ್ಲಿರುವ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರು ಮತ್ತು ನೌಕರರನ್ನು ಅವರು ಸೇವೆ ಸಲ್ಲಿಸುತ್ತಿರುವ ಹುದ್ದೆಗಳಲ್ಲೇ ಖಾಯಂಗೊಳಿಸಬೇಕು. ಗುತ್ತಿಗೆ ಹೊರ ಗುತ್ತಿಗೆ ಕಾರ್ಮಿಕರು ಮತ್ತು ನೌಕರರ ಸೇವೆ ಖಾಯಂ ಮಾಡುವವರೆಗೆ ಅವರನ್ನು ಒಳಗುತ್ತಿಗೆ ಅಥವಾ ಸಹಕಾರ ಸಂಘದ ಮೂಲಕ ಅದೇ ಹುದ್ದೆಗಳಲ್ಲಿ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು. ಕಳೆದ ಹಲವು ದಶಕಗಳಿಂದ ಸರ್ಕಾರದ ಇಲಾಖೆಗಳಲ್ಲಿ ಈಗಲೂ ಸೇವೆ ಸಲ್ಲಿಸುತ್ತಿರುವ ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಕಾರ್ಮಿಕರು ಮತ್ತು ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದು. ಈಗಾಗಲೇ ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿ ಅಂತಿಮಗೊಂಡಿರುವ ವಿವಿಧ ಉದ್ದಿಮೆಗಳ ಕಾರ್ಮಿಕರ ಪರಿಷ್ಕøತ ಕನಿಷ್ಠ ವೇತನವನ್ನು 2022 ರಿಂದ ಪೂರ್ವಾನ್ವಯಗೊಳಿಸಿ ಈ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್