
ಗದಗ, 05 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಅದರಂತೆ, 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗದಗ ಜಿಲ್ಲೆಯ ಏಳು ತಾಲೂಕಿನಗಳಿಂದ ಗದಗ ತಾಲೂಕಿನ ಅಂತೂರು, ಗಜೇಂದ್ರಗಡ ತಾಲೂಕಿನ ಹಾಲಕೇರಿ, ಲಕ್ಷ್ಮೇಶ್ವರ ತಾಲೂಕಿನ ಆಡರಕಟ್ಟ್ಟಿ, ಮುಂಡರಗಿ ತಾಲೂಕಿನ ಶಿವಾಜಿನಗರ, ನರಗುಂದ ತಾಲೂಕಿನ ವಾಸನ ಮತ್ತು ರೋಣ ತಾಲೂಕಿನ ಹಿರೇಹಾಳ, ಹಾಗೂ ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯತಿಗಳು ಆಯ್ಕೆಗೊಂಡಿರುತ್ತವೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮದಲ್ಲಿನ ಪ್ರತಿ ಕುಟುಂಬವು ವೈಯಕ್ತಿಕ ಶೌಚಾಲಯ ಹೊಂದಿರುವುದು, ಗ್ರಾಮ ಸಭೆ, ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು, ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕ, ಗ್ರಾಮ ಪಂಚಾಯತಿಯಲ್ಲಿ ಅತ್ಯುತ್ತಮವಾದ ಆಡಳಿತ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ನರೇಗಾ ಯೋಜನೆಯಲ್ಲಿ ಉತ್ತಮ ಪ್ರಗತಿ, ಗ್ರಾಮ ಆರೋಗ್ಯ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ, ಕಂದಾಯ ವಸೂಲಿ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯತಿ ಉತ್ತಮ ಸಾಧನೆ ತೋರಿದೆ.
ಗದಗ ಜಿಲ್ಲೆಯ ಏಳು ತಾಲೂಕಿನ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಕ್ಕಾಗಿ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಗದಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು, ಮತ್ತು ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಶುಭಾಶಯಗಳನ್ನು ವ್ಯಕ್ತಪಡಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP