
ಚಂಪಾವತ್, 05 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಚಂಪಾವತ್ ನಲ್ಲಿ ಪಾಟಿ ಬ್ಲಾಕ್‌ನಿಂದ ಹಿಂದಿರುಗುತ್ತಿದ್ದ ಮದುವೆ ಮೆರವಣಿಗೆಯ ಬೊಲೆರೊ ಕಾರು ಘಾಟ್ ಸಮೀಪದ ಬಾಗ್ಧರ್‌ನಲ್ಲಿ 200 ಮೀಟರ್ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಶವಗಳು ಹಾಗೂ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಲೋಹಾಘಾಟ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಮೃತರನ್ನು ಪ್ರಕಾಶ್ ಚಂದ್ರ ಉನಿಯಾಲ್ (40), ಕೇವಲ್ ಚಂದ್ರ ಉನಿಯಾಲ್ (35), ಸುರೇಶ್ ನೌಟಿಯಾಲ್ (32), ಪ್ರಿಯಾಂಶು ಚೌಬೆ (6) ಹಾಗೂ ಮತ್ತೊಬ್ಬ ಅಲ್ಮೋರಾ ನಿವಾಸಿಯಾಗಿದ್ದಾರೆ.
ಮದುವೆ ಮೆರವಣಿಗೆ ಡಿಸೆಂಬರ್ 4 ರಂದು ಬಲತಾರಿಗೆ ಆಗಮಿಸಿ, ಹಿಂತಿರುಗುವಾಗ ತಡರಾತ್ರಿ ಈ ದುರಂತ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa