
ಬೆಂಗಳೂರು, 05 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ತಾಂತ್ರಿಕ–ಕಾರ್ಯಾಚರಣಾ ವ್ಯತ್ಯಯ ಸತತವಾಗಿ ಮುಂದುವರಿಯುತ್ತಿದ್ದು, ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಒಟ್ಟು 102 ವಿಮಾನಗಳನ್ನು ರದ್ದುಪಡಿಸಲಾಗಿದೆ. ರದ್ದುಪಟ್ಟಿಗಳಲ್ಲಿ 50 ತೆರಳುವ ಮತ್ತು 52 ಆಗಮಿಸುವ ವಿಮಾನಗಳು ಸೇರಿವೆ. ಇದಲ್ಲದೆ 30ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ದಿಢೀರ್ ವಿಮಾನ ಹಾರಾಟ ರದ್ದುಗೊಂಡಿದ್ದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಇಂಡಿಗೋ ಕೌಂಟರ್‌ಗಳ ಬಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವಿಮಾನಗಳ ಹಾರಾಟ ವ್ಯತ್ಯಯದಿಂದ, ಆಗಮನ ಬಾಗಿಲುಗಳಲ್ಲಿ ಪ್ರಯಾಣಿಕರ ಕೊರತೆ ಸ್ಪಷ್ಟವಾಗಿ ಗೋಚರಿಸಿ, ಸಾಮಾನ್ಯವಾಗಿ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳು ಇಂದು ಖಾಲಿ ಖಾಲಿಯಾಗಿ ಕಂಡವು. ಪ್ರಯಾಣಿಕರಿಲ್ಲದ ಹಿನ್ನಲೆಯಲ್ಲಿ ಟ್ಯಾಕ್ಸಿ ಚಾಲಕರು ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಇಂಡಿಗೋ ಹಾರಾಟ ಸ್ಥಗಿತದಿಂದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರಿಲ್ಲದೆ ಬಿಎಂಟಿಸಿಯ ವಾಯುವಜ್ರ ಮತ್ತು ಕೆಎಸ್‌ಆರ್ಟಿಸಿಯ ಫೈ ಬಸ್‌ಗಳು ಬಿಕೋಎನ್ನುತ್ತಿವೆ. ಕಳೆದ ಮೂರು ದಿನಗಳಿಂದ ಬಿಎಂಟಿಸಿ ಸಂಗ್ರಹಣೆಯೂ ಗಣನೀಯ ಕುಸಿತ ಕಂಡಿದ್ದು, ಬಸ್ ಚಾಲಕರು ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ಎದುರಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa