
ನವದೆಹಲಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ನವೀಕರಣ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಡಿ-ಡೂಪ್ಲಿಕೇಶನ್ ಸಾಫ್ಟ್‌ವೇರ್ ಅನ್ನು ಬಳಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಇದರ ಪರಿಣಾಮವಾಗಿ ಬಿಹಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಸುಮಾರು 14.5 ಲಕ್ಷ ನಕಲಿ ಹೆಸರುಗಳು ಉಳಿದಿವೆ ಎಂದು ಕಾಂಗ್ರೆಸ್ ಹೇಳಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್, ಈ ಹಿಂದೆ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಡಿ-ಡೂಪ್ಲಿಕೇಶನ್ ಸಾಫ್ಟ್‌ವೇರ್ ಬಳಸಿ ನಕಲಿ ಹೆಸರುಗಳನ್ನು ಗುರುತಿಸಿ ಅಳಿಸಲಾಗುತ್ತಿತ್ತು ಎಂದು ತಿಳಿಸಿದರು. ಆದರೆ ಬಿಹಾರ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಆ ಸಾಫ್ಟ್‌ವೇರ್ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ಡಿ-ಡೂಪ್ಲಿಕೇಶನ್ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು, ಯಾವ ಹಂತದಲ್ಲಿ ನಿಲ್ಲಿಸಲಾಯಿತು ಮತ್ತು ಪ್ರಸ್ತುತ ಯಾವ ಹೊಸ ಅಪ್ಲಿಕೇಶನ್ ಅಥವಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ ಎಂಬುದನ್ನು ಚುನಾವಣಾ ಆಯೋಗವು ಪಾರದರ್ಶಕವಾಗಿ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕಾಪಾಡಲು ಆಯೋಗವು ರಾಷ್ಟ್ರದ ಜನತೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಹೇಳಿದರು.
ಸ್ಪಷ್ಟ ಮಾರ್ಗಸೂಚಿಗಳು ಹಾಗೂ ಸಮರ್ಪಕ ತರಬೇತಿ ಇಲ್ಲದ ಕಾರಣ ಬೂತ್ ಮಟ್ಟದ ಅಧಿಕಾರಿಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನೇಕ ನಿಜವಾದ ಮತದಾರರ ಹೆಸರುಗಳು ತಪ್ಪಾಗಿ ಅಳಿಸಿಹೋಗುವ ಅಪಾಯ ಇದೆ ಎಂದು ಸೆಂಥಿಲ್ ಎಚ್ಚರಿಸಿದರು.
ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಕರಡು ಮತದಾರರ ಪಟ್ಟಿಗಳಲ್ಲಿ ಶೇಕಡಾ 10ರಿಂದ 15ರಷ್ಟು ನೈಜ ಮತದಾರರ ಹೆಸರುಗಳು ಕೈಬಿಡಲ್ಪಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. ದೇಶಾದ್ಯಂತ ಈ ಪ್ರಕ್ರಿಯೆ ಮೂಲಕ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಚುನಾವಣಾ ಆಯೋಗವು ತುರ್ತುಗತಿಯಲ್ಲಿ ಮತ್ತು ಯೋಚನೆಯಿಲ್ಲದೆ ಕ್ರಮ ಕೈಗೊಂಡಿದೆ ಎಂದು ಪಕ್ಷ ಆರೋಪಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa