ಆಂಧ್ರ ಪ್ರದೇಶದಲ್ಲಿ ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ
ಎರಡು ಬೋಗಿಗಳು ಭಸ್ಮ; 70 ವರ್ಷದ ವೃದ್ಧ ಸಾವು
Train fire


ವಿಶಾಖಪಟ್ಟಣಂ, 29 ಡಿಸೆಂಬರ್(ಹಿ.ಸ.):

ಆ್ಯಂಕರ್ : ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿಗೆ ಭಾರಿ ಬೆಂಕಿ ಹೊತ್ತಿಕೊಂಡು, ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ದುರಂತದಲ್ಲಿ ವಿಜಯವಾಡದ ಸುಂದರ್ ಎಂದು ಗುರುತಿಸಲಾದ 70 ವರ್ಷದ ವೃದ್ಧರು ಸಾವನ್ನಪ್ಪಿದ್ದಾರೆ.

ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಎರ್ನಾಕುಲಂಗೆ ತೆರಳುತ್ತಿದ್ದ (ರೈಲು ಸಂಖ್ಯೆ 18189) ಎಕ್ಸ್‌ಪ್ರೆಸ್‌ನ ಬಿ1 ಕೋಚ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣುತ್ತಿದ್ದಂತೆ ಲೋಕೋ ಪೈಲಟ್ ತಕ್ಷಣ ರೈಲನ್ನು ಯಲಮಂಚಿಲಿ ನಿಲ್ದಾಣದಲ್ಲಿ ನಿಲ್ಲಿಸಿದ್ದು, ನಂತರ ರೈಲ್ವೆ ಸಿಬ್ಬಂದಿ ಸುಟ್ಟ ಬೋಗಿಗಳನ್ನು ಉಳಿದ ರೈಲಿನಿಂದ ಬೇರ್ಪಡಿಸಿದರು. ಈ ರೈಲು ಜಮ್ಶೆಡ್‌ಪುರದಿಂದ ಕೇರಳದ ಎರ್ನಾಕುಲಂಗೆ ಪ್ರಯಾಣಿಸುತ್ತಿತ್ತು. ಅಪಘಾತವು ವಿಶಾಖಪಟ್ಟಣಂನಿಂದ ಸುಮಾರು 66 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ.

ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ ತುಹಿನ್ ಸಿನ್ಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಬದುಕುಳಿದ ಪ್ರಯಾಣಿಕರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಕಳುಹಿಸಲು ಪರ್ಯಾಯ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಹೊಗೆ ಮತ್ತು ತೀವ್ರ ಜ್ವಾಲೆಗಳ ಕಾರಣ ರಕ್ಷಣಾ ಕಾರ್ಯಾಚರಣೆ ಆರಂಭದಲ್ಲಿ ಕಷ್ಟಕರವಾಗಿತ್ತು. ಪ್ರಯಾಣಿಕರನ್ನು ಕೋಚ್‌ಗಳ ಕಿಟಕಿಗಳನ್ನು ಒಡೆದು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಪ್ಯಾಂಟ್ರಿ ಕಾರಿನ ಪಕ್ಕದಲ್ಲಿರುವ ಬಿ1 ಕೋಚ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ನಂತರ ಅದು ಎಂ2 ಕೋಚ್‌ಗೆ ಹರಡಿತು. ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಈ ಎರಡೂ ಕೋಚ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು.

ಘಟನೆಯಿಂದಾಗಿ ಸುಮಾರು 2,000 ಪ್ರಯಾಣಿಕರು ಕೆಲಕಾಲ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಆದರೆ, ಅಧಿಕಾರಿಗಳ ತ್ವರಿತ ಕ್ರಮದಿಂದ ಪರಿಸ್ಥಿತಿ ಇದೀಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ವರದಿಯಾಗಿದೆ. ಬೆಂಕಿಯ ನಿಖರ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ಪ್ರಯೋಗಾಲಯ ತಂಡ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande