ದೆಹಲಿಯಲ್ಲಿ ದಟ್ಟ ಮಂಜು ; ಇಂಡಿಗೋ–ಏರ್ ಇಂಡಿಯಾ ವಿಮಾನ ಸಂಚಾರದಲ್ಲಿ ವಿಳಂಬ
ಅಂತಾರಾಷ್ಟ್ರೀಯ
Fog


ನವದೆಹಲಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹೊಸ ವರ್ಷಕ್ಕೆ ದಿನಗಳಷ್ಟೇ ಬಾಕಿಯಿರುವಾಗ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಮಂಜು ಮತ್ತು ಚಳಿ ತೀವ್ರವಾಗಿದ್ದು, ರಾಷ್ಟ್ರ ರಾಜಧಾನಿಯ ಹಲವೆಡೆ ದಟ್ಟ ಮಂಜು ಗೋಚರತೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಹಾಗೂ ಏರ್ ಇಂಡಿಯಾ ವಿಮಾನಗಳ ಆಗಮನ ಮತ್ತು ನಿರ್ಗಮನ ವಿಳಂಬವಾಗಿವೆ.

ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರವು ಬೆಳಿಗ್ಗೆ 8 ಗಂಟೆಗೆ ಕಳಪೆ ಗೋಚರತೆಯಿಂದಾಗಿ ವಿಮಾನ ಕಾರ್ಯಾಚರಣೆಗಳಿಗೆ ಕ್ಯಾಟ್-3 ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸಿರುವುದಾಗಿ ಘೋಷಿಸಿದೆ. ಮಂಜು ಮತ್ತು ಶೀತ ಅಲೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿವೆ.

ಇಂಡಿಗೋ ಏರ್‌ಲೈನ್ಸ್ ತನ್ನ ಪ್ರಯಾಣ ಸಲಹೆಯಲ್ಲಿ, “ಇಂದು ಬೆಳಿಗ್ಗೆ ದೆಹಲಿ ಹಾಗೂ ಉತ್ತರ ಭಾರತದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಮಂಜಿನ ಪರಿಸ್ಥಿತಿ ಮುಂದುವರೆದಿದೆ. ಕಡಿಮೆ ಗೋಚರತೆ ದಿನವಿಡೀ ಮುಂದುವರಿದಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ತಿಳಿಸಿದೆ.

“ಪರಿಸ್ಥಿತಿಯನ್ನು ನಾವು ನಿಕಟವಾಗಿ ಗಮನಿಸುತ್ತಿದ್ದು, ಪ್ರಯಾಣ ಸಾಧ್ಯವಾದಷ್ಟು ಸುಗಮವಾಗಿರಲು ಅಗತ್ಯವಿರುವಲ್ಲಿ ಕಾರ್ಯಾಚರಣಾ ಹೊಂದಾಣಿಕೆಗಳನ್ನು ಮಾಡಲಾಗುತ್ತಿದೆ” ಎಂದು ಇಂಡಿಗೋ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.

ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ಇತ್ತೀಚಿನ ವಿಮಾನ ಸ್ಥಿತಿಯನ್ನು ಪರಿಶೀಲಿಸುವಂತೆ ಇಂಡಿಗೋ ಪ್ರಯಾಣಿಕರಿಗೆ ಸಲಹೆ ನೀಡಿದ್ದು, ಮಂಜಿನಿಂದ ರಸ್ತೆ ಸಂಚಾರಕ್ಕೂ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಸಮಯವನ್ನು ಮೀಸಲಿಡಲು ಸೂಚಿಸಿದೆ. ಯಾವುದೇ ಬದಲಾವಣೆಗಳಿದ್ದರೆ ನೋಂದಾಯಿತ ಸಂಪರ್ಕ ವಿವರಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ತಕ್ಷಣ ಮಾಹಿತಿ ನೀಡಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ಏರ್ ಇಂಡಿಯಾ ಕೂಡ ಎಚ್ಚರಿಕೆ ನೀಡಿದ್ದು, “ಬೆಳಿಗ್ಗೆಯ ಹವಾಮಾನ ಮುನ್ಸೂಚನೆಯ ಪ್ರಕಾರ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲ ಭಾಗಗಳಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆ ಮುಂದುವರಿಯುವ ಸಾಧ್ಯತೆ ಇದೆ. ಇದು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಅಡಚಣೆಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ” ಎಂದು ಎಕ್ಸ್‌ನಲ್ಲಿ ಪ್ರಕಟಿಸಿದೆ.

ಮಂಜಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಿ, ತಮ್ಮ ವಿಮಾನಗಳ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande