
ನವದೆಹಲಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಗುರು ಗೋವಿಂದ ಸಿಂಗ್ ಜಿ ಅವರ ಪವಿತ್ರ ಪ್ರಕಾಶ್ ಉತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಸಿಖ್ ಗುರುಗೆ ಗೌರವ ನಮನ ಸಲ್ಲಿಸಿದರು.
ಶ್ರೀ ಗುರು ಗೋವಿಂದ ಸಿಂಗ್ ಜಿ ಅವರು ಧೈರ್ಯ, ಕರುಣೆ ಮತ್ತು ತ್ಯಾಗದ ಜೀವಂತ ಸಾಕಾರರಾಗಿದ್ದು, ಅವರ ಜೀವನ ಮತ್ತು ಬೋಧನೆಗಳು ಸತ್ಯ, ನ್ಯಾಯ ಮತ್ತು ಸದಾಚಾರಕ್ಕಾಗಿ ನಿಲ್ಲುವ ಧೈರ್ಯವನ್ನು ನಮಗೆ ನೀಡುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.
ಮಾನವ ಘನತೆಯನ್ನು ರಕ್ಷಿಸುವುದು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಶ್ರೀ ಗುರು ಗೋವಿಂದ ಸಿಂಗ್ ಜಿ ಅವರ ತತ್ವದ ಮೂಲವಾಗಿದ್ದು, ಅವರ ದೃಷ್ಟಿಕೋನವು ಪೀಳಿಗೆಯಿಂದ ಪೀಳಿಗೆಗೆ ಸೇವೆ ಮತ್ತು ನಿಸ್ವಾರ್ಥ ಕರ್ತವ್ಯದ ದಾರಿಯನ್ನು ತೋರಿಸುತ್ತಲೇ ಇದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ತಾನು ತಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ್ದುದನ್ನು ಸ್ಮರಿಸಿದ ಪ್ರಧಾನಿ, ಅಲ್ಲಿ ಶ್ರೀ ಗುರು ಗೋವಿಂದ ಸಿಂಗ್ ಜಿ ಮತ್ತು ಮಾತಾ ಸಾಹಿಬ್ ಕೌರ್ ಜಿ ಅವರ ಪವಿತ್ರ ಜೋರ್ ಸಾಹಿಬ್ ದರ್ಶನ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಭೇಟಿಯ ಚಿತ್ರಗಳನ್ನು ಕೂಡ ಪ್ರಧಾನಿ ಅವರು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಕಾಶ್ ಉತ್ಸವದ ಈ ಪವಿತ್ರ ಸಂದರ್ಭದಲ್ಲಿ, ಶ್ರೀ ಗುರು ಗೋವಿಂದ ಸಿಂಗ್ ಜಿ ಅವರ ಜೀವನ ಮೌಲ್ಯಗಳು ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಿರಲಿ ಎಂಬ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa