
ಕೊಪ್ಪಳ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025ರ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 1996 (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ನಿಯಮಗಳು 1996ರ ನಿಯಮ 8ರ ಪ್ರಕಾರ ಪುರಸಭೆ ಮತ್ತು ಪಟ್ಟಣ ಪಂಚಾಯತಿ ಮತ ಕ್ಷೇತ್ರದಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಬೇಕಾಗಿದೆ.
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ, ಯೋಜನಾ ಸಮಿತಿಯ ಸದಸ್ಯರುಗಳ ಚುನಾವಣೆ) ನಿಯಮಗಳು-1996 ನಿಯಮ 8 ರನ್ವಯ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಯೋಜನಾ ಸಮಿತಿ ಚುನಾವಣೆಗಳ ಪದನಿಮಿತ್ತ ಚುನಾವಣಾ ಅಧಿಕಾರಿ ವರ್ಣಿತ್ ನೇಗಿ ಅವರು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಯೋಜನಾ ಸಮಿತಿ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಿರುತ್ತಾರೆ.
ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025ಕ್ಕೆ ಸಂಬಂಧಿಸಿದಂತೆ ಕಾರಟಗಿ ಪುರಸಭೆ ಮತ್ತು ಕುಕನೂರು, ಕನಕಗಿರಿ, ತಾವರಗೇರಾ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತಿ ಸೇರಿದಂತೆ ಈ ನಗರ ಸ್ಥಳೀಯ ಸಂಸ್ಥೆಗಳ ಪುರಸಭಾ ಕ್ಷೇತ್ರದ ಒಟ್ಟು 96 ಮತದಾರರಿದ್ದು, ಈ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಂದ 6 ಸದಸ್ಯರನ್ನು ಚುನಾಯಿಸಬೇಕಾಗಿದೆ.
ಚುನಾವಣೆ ವೇಳಾಪಟ್ಟಿ ವಿವರ : ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025 ವೇಳಾಪಟ್ಟಿ ವಿವರ ಇಂತಿದೆ. ನಾಮ ನಿರ್ದೇಶನಗಳನ್ನು ಸಲ್ಲಿಸಲು 2025ರ ಡಿಸೆಂಬರ್ 23 ರಿಂದ 2026ರ ಜನವರಿ 5ರ ವರೆಗೆ ಬೆಳಿಗೆ 10 ರಿಂದ ಅಪರಾಹ್ನ 3 ಗಂಟೆಯವರೆಗೆ ಸಮಯವಕಾಶವಿದ್ದು, ಚುನಾವಣಾಧಿಕಾರಿಗಳು, ಜಿಲ್ಲಾ ಯೋಜನಾ ಸಮಿತಿ ಚುನಾವಣೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ, ಕೊಪ್ಪಳ ಇಲ್ಲಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬೇಕು. 2026ರ ಜನವರಿ 6 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಜನವರಿ 9 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನಾಂಕವಾಗಿದ್ದು, ಜನವರಿ 13 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 4 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಮತದಾನದ ಜರುಗಲಿದೆ.
ಜ. 13ರಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯುವ ಮೂಲಕ ಈ ಚುನಾವಣೆ ಪ್ರಕ್ರಿಯ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಯೋಜನಾ ಸಮಿತಿ ಚುನಾವಣೆಯ ಚುನಾವಣಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್