
ನವದೆಹಲಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷದ ಪ್ರಸ್ತುತ ಕಾರ್ಯವೈಖರಿಯ ಬಗ್ಗೆ ಹಿರಿಯ ನಾಯಕ ಹಾಗೂ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಪ್ರಶ್ನೆಗಳನ್ನು ಎತ್ತಿದ್ದು, ಸಂಘಟನೆಯಲ್ಲಿ ಅತಿಯಾದ ಕೇಂದ್ರೀಕರಣ ಕಂಡುಬರುತ್ತಿದ್ದು, ಇದೀಗ ಹೆಚ್ಚು ಪ್ರಾಯೋಗಿಕ ಹಾಗೂ ವಿಕೇಂದ್ರೀಕೃತ ಕಾರ್ಯನಿರ್ವಹಣೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಈ ವಿಚಾರವನ್ನು ಪ್ರಸ್ತಾಪಿಸಿದರು. ಯಾವುದೇ ವಿಷಯದಲ್ಲಿ ರಾಹುಲ್ ಗಾಂಧಿಯವರನ್ನು ಮನವೊಲಿಸುವುದು ಸುಲಭವಲ್ಲ ಎಂದು ಅವರು ಸಭೆಯ ವೇಳೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮುಗುಳ್ನಗುತ್ತಾ, “ಅದು ಅವರ (ದಿಗ್ವಿಜಯ್ ಸಿಂಗ್) ಅಭಿಪ್ರಾಯ” ಎಂದು ಉತ್ತರಿಸಿದರು.
ಇದೇ ತಿಂಗಳ ಡಿಸೆಂಬರ್ 19ರಂದು ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ರಾಹುಲ್ ಗಾಂಧಿಯನ್ನು ಟ್ಯಾಗ್ ಮಾಡಿ, ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳಲ್ಲಿ ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಸಂಘಟನೆಗೆ ಇನ್ನೂ ಆಳವಾದ ಸುಧಾರಣೆಗಳ ಅಗತ್ಯವಿದೆ ಎಂದು ಬರೆದಿದ್ದರು. ಚುನಾವಣಾ ಆಯೋಗದಂತಹ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯವಿರುವಂತೆಯೇ, ಪಕ್ಷದ ಸಂಘಟನೆಯಲ್ಲೂ ಸುಧಾರಣೆ ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸಂಘಟನೆ ನಿರ್ಮಾಣ ಅಭಿಯಾನ ಮಾತ್ರ ಸಾಕಾಗುವುದಿಲ್ಲ ಎಂದು ಕೂಡ ಅವರು ಉಲ್ಲೇಖಿಸಿದ್ದರು. ಸಿಡಬ್ಲ್ಯೂಸಿ ಸಭೆಯ ನಂತರ ಈ ಪೋಸ್ಟ್ ಅನ್ನು ಅವರು ಪಿನ್ ಮಾಡಿರುವುದು ಗಮನ ಸೆಳೆಯಿತು.
ಕಾಂಗ್ರೆಸ್ ಪಕ್ಷವು ವಿಕೇಂದ್ರೀಕೃತ ಕಾರ್ಯವೈಖರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದ ದಿಗ್ವಿಜಯ್ ಸಿಂಗ್, “ನೀವು ಇದನ್ನು ಮಾಡುತ್ತೀರಿ ಎಂಬ ವಿಶ್ವಾಸ ನನಗಿದೆ, ಏಕೆಂದರೆ ನೀವು ಅದನ್ನು ಮಾಡಲು ಸಾಮರ್ಥ್ಯ ಹೊಂದಿದ್ದೀರಿ. ಒಂದೇ ಸಮಸ್ಯೆ ಎಂದರೆ ನಿಮ್ಮನ್ನು ಮನವೊಲಿಸುವುದು ಸುಲಭವಲ್ಲ” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪೋಸ್ಟ್‌ನ ಅಂತ್ಯದಲ್ಲಿ ಅವರು “ಜೈ ಸಿಯಾ ರಾಮ್” ಎಂಬ ಘೋಷಣೆಯನ್ನು ಕೂಡ ಸೇರಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ತಾವು ಆರ್‌ಎಸ್‌ಎಸ್ ಅಥವಾ ಅದರ ಸಿದ್ಧಾಂತದ ಬಗ್ಗೆ ಮಾತನಾಡುತ್ತಿಲ್ಲ, ಪಕ್ಷದ ಸಂಘಟನಾ ಕಾರ್ಯವೈಖರಿಯ ಬಗ್ಗೆ ಮಾತ್ರ ಚರ್ಚಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
“ನಾನು ಆರ್‌ಎಸ್‌ಎಸ್ ಮತ್ತು ಕೇಂದ್ರ ಸರ್ಕಾರದ ನೀತಿಗಳ ಕಟ್ಟಾ ವಿರೋಧಿಯಾಗಿದ್ದೆ, ಇದ್ದೇನೆ ಮತ್ತು ಮುಂದುವರಿಯುತ್ತೇನೆ. ಸಂಘಟನೆಯನ್ನು ಬಲಪಡಿಸುವ ಬಗ್ಗೆ ಮಾತನಾಡುವುದು ಅಪರಾಧವಲ್ಲ. ಚುನಾವಣಾ ಸುಧಾರಣೆಗಳ ಕುರಿತು ಮಾತನಾಡುವುದೂ ಅಪರಾಧವೇ?” ಎಂದು ಅವರು ಪ್ರಶ್ನಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa