ಜನವರಿ 5ರಿಂದ ದೇಶದಾದ್ಯಂತ ಮನರೇಗಾ ಉಳಿಸಿ ಆಂದೋಲನ : ಕಾಂಗ್ರೆಸ್
ಕೋವಿಡ್
Cong CWC meeting


ನವದೆಹಲಿ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ರದ್ದತಿ ಹಾಗೂ ಅದನ್ನು ಹೊಸ ಯೋಜನೆಯೊಂದಿಗೆ ಬದಲಾಯಿಸುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ, ಕಾಂಗ್ರೆಸ್ ಪಕ್ಷವು ಜನವರಿ 5ರಿಂದ ದೇಶಾದ್ಯಂತ ಮನರೇಗಾ ಉಳಿಸಿ ಆಂದೋಲನವನ್ನು ಆರಂಭಿಸುವುದಾಗಿ ಘೋಷಿಸಿದೆ.

ಶನಿವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಂತರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮನರೇಗಾ ಕೇವಲ ಉದ್ಯೋಗ ಯೋಜನೆಯಲ್ಲ, ದೇಶದ ಲಕ್ಷಾಂತರ ಗ್ರಾಮೀಣ ಕಾರ್ಮಿಕರಿಗೆ ಕನಿಷ್ಠ ವೇತನಕ್ಕೆ ಕಾನೂನುಬದ್ಧ ಹಕ್ಕು ಒದಗಿಸಿದ ಹಕ್ಕು ಆಧಾರಿತ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮನರೇಗಾ ಬದಲಿಗೆ ಪರಿಚಯಿಸಿರುವ ‘ವಿಕಾಸ್ ಭಾರತ್: ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ)’ ಅಥವಾ VB-G ರಾಮ್‌ಜಿ ಯೋಜನೆ, ನೇರ ಹಕ್ಕುಗಳ ಚೌಕಟ್ಟಿನ ಮೇಲೆ ಮತ್ತು ರಾಜ್ಯಗಳ ಫೆಡರಲ್ ರಚನೆಯ ಮೇಲೆ ದಾಳಿ ನಡೆಸುವಂತಿದೆ ಎಂದು ಖರ್ಗೆ ಆರೋಪಿಸಿದರು. ಈ ಹೊಸ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ಬಡವರು ಹಾಗೂ ಗ್ರಾಮೀಣ ಆರ್ಥಿಕತಿಗೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ನೀತಿ ಆಯೋಗದ ಅಧ್ಯಯನವು ಮನರೇಗಾ ಮೂಲಕ ದೀರ್ಘಕಾಲಿಕ ಆಸ್ತಿಗಳ ಸೃಷ್ಟಿಯಾಗಿದೆ ಎಂಬುದನ್ನು ದೃಢಪಡಿಸಿದ್ದು, ಡಿಸೆಂಬರ್ 16ರಂದು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಇದನ್ನು ಒಪ್ಪಿಕೊಂಡಿದೆ ಎಂದು ಖರ್ಗೆ ಉಲ್ಲೇಖಿಸಿದರು.

ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವ ಮೂಲಕ ಗ್ರಾಮೀಣ ಬಿಕ್ಕಟ್ಟು ನಿರ್ವಹಣೆಯಲ್ಲಿ ಮನರೇಗಾ ಮಹತ್ವದ ಪಾತ್ರ ವಹಿಸಿತ್ತು ಎಂದರು.

ಈ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸದೆ ಪ್ರಧಾನ ಮಂತ್ರಿ ಕಚೇರಿಯಿಂದ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮನರೇಗಾ ದೇಶದ ಲಕ್ಷಾಂತರ ಜನರಿಗೆ ಕಾನೂನುಬದ್ಧ ವೇತನ ಹಕ್ಕನ್ನು ಖಾತರಿಪಡಿಸಿದೆ ಎಂದರು. ಹೊಸ ಯೋಜನೆಯು ಆ ಹಕ್ಕು ಆಧಾರಿತ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರ ಜೊತೆಗೆ ಫೆಡರಲ್ ಸಮತೋಲನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ಅವರು ಎಚ್ಚರಿಸಿದರು.

ಗ್ರಾಮೀಣ ಆರ್ಥಿಕತೆ ಮತ್ತು ಬಡವರ ಹಿತಾಸಕ್ತಿಗೆ ಗಂಭೀರ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ ರಾಹುಲ್ ಗಾಂಧಿ, ಸರ್ಕಾರದ ನೀತಿ ಲಾಭಗಳನ್ನು ಆಯ್ದ ಕೈಗಾರಿಕೋದ್ಯಮಿಗಳ ಗುಂಪಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮನರೇಗಾ ಬಲಪಡಿಸುವ ಪರಂಪರೆಯನ್ನು ರಕ್ಷಿಸಲು ಹಾಗೂ ಗ್ರಾಮೀಣ ಕಾರ್ಮಿಕರ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಲು ಕಾಂಗ್ರೆಸ್ ಹೋರಾಟ ಮುಂದುವರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande