

ಕೊಪ್ಪಳ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂಬಂಧಿತ ವಿವಿಧ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಹೇಳಿದ್ದಾರೆ.
ಅವರು ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ವಿಕಲಚೇತನರ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 11 ಡಿಸೆಂಬರ್ 1992 ರಂದು ಅನುಮೋದಿಸಿದ್ದು, ಈ ಒಡಂಬಡಿಕೆಯ ಪರಿಚ್ಛೇದ 23 ರನ್ವಯ ಯಾವುದೇ ರೀತಿಯ ವಿಶೇಷ ಪೋಷಣೆ ಅವಶ್ಯವಿರುವ ಮಕ್ಕಳು, ತಮ್ಮ ಜೀವನವನ್ನು ಸಂಪೂರ್ಣವಾಗಿ ಮತ್ತು ಸ್ವತಂತ್ರವಾಗಿ ನಡೆಸಲು ಹಾಗೂ ಅನುಭವಿಸುವಂತಹ ವಾತಾವರಣವನ್ನು ಕಲ್ಪಿಸಲು ಅವರಿಗೆ ವಿಶೇಷ ಪೋಷಣೆ ಮತ್ತು ಬೆಂಬಲವನ್ನು ಒದಗಿಸಬೇಕೆಂದು ತಿಳಿಸುತ್ತದೆ.
ನಮ್ಮ ಸಂವಿಧಾನ ಮತ್ತು ಕಾನೂನುಗಳಲ್ಲಿಯೂ ಇಂತಹ ಮಕ್ಕಳಿಗೆ ವಿಶೇಷ ಅವಕಾಶ ಮತ್ತು ರಕ್ಷಣೆಯನ್ನು ಒದಗಿಸಿದೆ. ಭಾರತ ಸಂವಿಧಾನದ ಪರಿಚ್ಛೇದ 21(ಎ) ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರನ್ವಯ ವಿಶೇಷ ಪೋಷಣೆ ಅವಶ್ಯವಿರುವ ಮಕ್ಕಳಿಗೂ ಸಹ ಶಿಕ್ಷಣದ ಹಕ್ಕನ್ನು ಖಾತ್ರಿ ಪಡಿಸಲು ಸಮಗ್ರ ಶಿಕ್ಷಾ ಅಭಿಯಾನದನ್ವಯ ವಿಶೇಷ ಶಿಕ್ಷಣ, ವಿಶೇಷ ಸಾಧನ ಮತ್ತು ವಿದ್ಯಾ ಸಲಕರಣೆಗಳು, ಮನೆ ಪಾಠದ ಮೂಲಕ ಅವರ ಶಿಕ್ಷಣ ಹಕ್ಕನ್ನು ಖಾತ್ರಿಪಡಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012ರನ್ವಯ ವಿಶೇಷ ಪೋಷಣೆ ಅವಶ್ಯವಿರುವ ಮಕ್ಕಳ ಮೇಲೆನ ಯಾವುದೇ ರೀತಿಯ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಹಲ್ಲೆಗಳನ್ನು ತೀವ್ರತರ ಲೈಂಗಿಕ ಅಪರಾಧಗಳೆಂದು ಪರಿಗಣಿಸಿ ಅತಂಹ ಕೃತ್ಯವನ್ನು ಎಸಗಿದವರಿಗೆ ಘೋರ ಕಠಿಣ ಶಿಕ್ಷೆಯನ್ನು ವಿಧಿಸಲು ಅವಕಾಶವನ್ನು ನೀಡಿದೆ ಎಂದರು.
ಕರ್ನಾಟಕ ರಾಜ್ಯ ಸರಕಾರವು ವಿಶೇಷ ಚೇತನ ಮಕ್ಕಳ ಕಲ್ಯಾಣಕ್ಕಾಗಿ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸರಕಾರಗಳ ಒಟ್ಟು ಅನುದಾನದಲ್ಲಿ 5% ಅನುದಾನವನ್ನು ಮೀಸಲಿಟ್ಟು ಕಾರ್ಯಕ್ರಮಗಳನ್ನು ರೂಪಿಸಿ ಅವಕಾಶಗಳನ್ನು ನೀಡಿದೆ. ಆದ್ದರಿಂದ ತಾವುಗಳು ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂಬಂಧಿತ ವಿವಿಧ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸಿ. ಒಂದು ವೇಳೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನೇರವಾಗಿ ಅಥವಾದೂರವಾಣಿ ಸಂಖ್ಯೆ: 080-22115290 /92 ಗೆ ಅಥವಾ ತಿತಿತಿ.ಞsಛಿಠಿಛಿಡಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ದೂರು ನೀಡಬಹುದಾಗಿದೆ ಅಥವಾ ಜಿಲ್ಲಾ ಮಟ್ಟದಲ್ಲಿ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಹಾಗೂ ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮುತ್ತಣ್ಣ ಸರವಗೋಳ ಅವರು, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ, ಸಂಸ್ಥೆಯ ವಶದಲ್ಲಿರುವ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಎಸಗಿದರೆ, ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದರೆ, ಭಿಕ್ಷಾಟನೆಗಾಗಿ ಮಕ್ಕಳ ಅಂಗವನ್ನು ಊನಗೊಳಿಸಿದರೆ, ಮಕ್ಕಳಿಗೆ ತಂಬಾಕು, ತಂಬಾಕು ಉತ್ಪನ್ನ, ಮಾದಕ ವಸ್ತುಗಳನ್ನು ನೀಡಿದರೆ, ಅಕ್ರಮ ಸಾಗಾಟಕ್ಕೆ ಬಳಸಿದರೆ, ಅಕ್ರಮವಾಗಿ ದತ್ತು ಪಡೆದಲ್ಲಿ, ಮಾರಾಟ ಮಾಡಿದಲ್ಲಿ ಅಥವಾ ಶಿಸ್ತಿನ ಹೆಸರಿನಲ್ಲಿ ಶಿಕ್ಷೆಯನ್ನು ನೀಡಿದಲ್ಲಿ ಅಂತಹವರಿಗೆ ಕಾಯ್ದೆಯಡಿಯಲ್ಲಿ ಸಾಮಾನ್ಯರ ಮೇಲೆನ ಅಪರಾಧಕ್ಕೆ ನೀಡುವ ಶಿಕ್ಷೆಯ ಎರಡರಷ್ಟು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯನ್ನು ವಿಧಿಸಲು ಅವಕಾಶವನ್ನು ನೀಡಿದೆ. ಈ ಕಾಯ್ದೆಯನ್ವಯ ಪ್ರತಿ ಪೊಲೀಸ್ ಠಾಣೆಯ ಅರಕ್ಷಕ ಉಪ-ನಿರೀಕ್ಷಕರನ್ನು ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳೆಂದು ಗುರುತಿಸಿದ್ದು, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಪಡಿಸಬಹುದಾಗಿದೆ. ಅಂತಹ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯಿಂದ ಅಗತ್ಯ ಪುನರವಸತಿಯನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಈ ಕಾಯ್ದೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಪರಶುರಾಮ ವಾಯ್ ಶೆಟ್ಟೆಪ್ಪನವರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಡಗದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕೊಪ್ಪಳ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ. ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕ ಹರೀಶ ಜೋಗಿ ಅವರು ಮಕ್ಕಳ ಕಾನೂನುಗಳ ಕುರಿತು ತರಬೇತಿಯನ್ನು ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರತಿಭಾ ನಿರೂಪಿಸಿದರು. ಜಿಲ್ಲಾ ರವಿ ಬಡಿಗೇರ ಸ್ವಾಗತಿಸಿದರು. ದೇವರಾಜ ತಿಲಗರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ವಿಕಲಚೇತನರ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್