
ಗಂಗಾವತಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಟೆಕ್ಸಾಕ್ ಬೆಂಗಳೂರು, ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ (ರ್ಯಾಂಪ್) ಯೋಜನೆಯಡಿಯಲ್ಲಿ ಟ್ರೇಡ್ಸ್ (ಖಿಖeಆS) ಯೋಜನೆ ಕುರಿತು ಗಂಗಾವತಿಯ ಗಜಾನನ ಸಾಮಿಲ್ ಹತ್ತಿರದ ಶಿವ ಟಾಕೀಸ್ ಹಿಂಬಾದಲ್ಲಿನ ಶ್ರೀ ಸಾಯಿ ಲಕ್ಷ್ಮೀ ರೆಸಿಡೆನ್ಸಿಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಎಸ್.ಎಲ್.ವಿ ಇಂಡಸ್ಟೀಸ್ ಕೈಗಾರಿಕೋದ್ಯಮಿ ಕಲ್ಗುಡಿ ನಾಗೇಶರಾವ್ ಉದ್ಘಾಟಿಸಿದರು. ನಂತರ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಉದ್ಯಮ ಪ್ರಾರಂಭಿಸಿ ವಿಸ್ತರಿಸುವುದು ಉದ್ಯಮದಾರರ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕೈಗಾರಿಕೆಗಳ ಸ್ಥಾಪನೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡುವುದರೊಂದಿಗೆ ಈ ಭಾಗದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕೆಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ ರ್ಯಾಂಪ್ ಯೋಜನೆಯಡಿಯಲ್ಲಿ ಟ್ರೇಡ್ಸ್ ಕಾರ್ಯಾಗಾರ ಈ ದಿನ ಗಂಗಾವತಿಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಾಗಾರದ ಸದುಪಯೋಗ ಪಡೆದು ಹಾಗೂ ಕೈಗಾರಿಕಾ ನೀತಿ 2025-30ರಲ್ಲಿ ನವದ್ಯೋಮಗಳಿಗೆ ಇರುವ ಪ್ರೋತ್ಸಾಹ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಠಿಸಲು ದೇಶದ ಆರ್ಥಿಕ ಪ್ರಗತಿಯಲ್ಲಿ ಭಾಗವಹಿಸಲು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
ಉದ್ಯಮಿ ಎನ್.ಆರ್. ಶ್ರೀನಿವಾಸ ಅವರು ಮಾತನಾಡಿ, ಉದ್ಯಮ ಸ್ಥಾಪಿಸುವುದು ಕಷ್ಟಕರವಾಗಿರುತ್ತದೆ. ಅದನ್ನು ಮುನ್ನಡೆಸಿಕೊಂಡು ಹೋಗಿ ಲಾಭದಾಯಕವಾಗಿ ಯಶಸ್ವಿಗೊಳಿಸಬೇಕು ಎಂದು ಹೊಸ ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.
ಎಸ್.ಬಿ.ಐ. ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಅವರು ಮಾತನಾಡಿ, ಟ್ರೇಡ್ಸ್ ಯೋಜನೆ ಕುರಿತು ವಿವರವಾಗಿ ಹಾಜರಿದ್ದ ಕೈಗಾರಿಕೋದ್ಯಮಿಗಳಿಗೆ ವಿವರಿಸಿದರು. ಡಸ್ಕೌಂಟಿಂಗ್ ಪ್ಲಾಟ್ ಫಾರಂ ಗೆ ಎಂ.ಎಸ್.ಎಂ.ಇ.ಗಳು ಭಾಗವಹಿಸುವುದು ಅತೀ ಅವಶ್ಯಕವಾಗಿದೆ ಎಂದು ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಉದ್ಯಮಿಗಳಾದ ಸರ್ವೇಶ, ಸಿದ್ದಣ್ಣ ಮಸ್ಕಿ, ಶ್ರೀಗುನ್ ಚಂದ್ ಮೋಹ್ತಾ, ಕೊಲ್ಲಿ ಬಸವರಾಜ್, ಸೂರ್ಯ ನಾರಾಯಣ್ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗಂಗಾವತಿಯ ರೈಸ್ ಮಿಲ್ ಅಸೋಸಿಯೇಷನ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್