
ವಿಜಯಪುರ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ಜಾಹೀರಾತುಗಳಿಗೆ ಮರುಳಾಗದೇ ವಸ್ತುವಿನ ಗುಣಮಟ್ಟ ಮೌಲ್ಯವನ್ನು ಅರಿತು ಎಚ್ಚರಿಕೆಯಿಂದ ಖರೀದಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಕಿವಿಮಾತು ಹೇಳಿದರು.
ವಿಜಯಪುರದ ಸಿಕ್ಯಾಬ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ನೈಜತೆ, ಗುಣಮಟ್ಟ ಪರೀಕ್ಷಿಸಿದ ನಂತರವೇ ಖರೀದಿಸಲು ಮುಂದಾಗಬೇಕು. ಟಿವಿ ಸೇರಿದಂತೆ ವಿವಿಧ ಜಾಹೀರಾತುಗಳಿಗೆ ಮಾರು ಹೋಗದೆ ಅತ್ಯಂತ ಎಚ್ಚರಿಕೆಯಿಂದ ವಸ್ತುವನ್ನು ಖರೀದಿಸಬೇಕು.ಪ್ರತಿಯೊಂದು ವಸ್ತುವಿನ ಖರೀದಿ ಕಡ್ಡಾಯವಾಗಿ ರಸೀದಿಯನ್ನು ಪಡೆಯುವುದು ಗ್ರಾಹಕರ ಹಕ್ಕಾಗಿದೆ ಎಂದು ಅವರು ಹೇಳಿದರು.
ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ ಘೋಷ ವಾಕ್ಯ ಕುರಿತಂತೆ ಉಪನ್ಯಾಸ ನೀಡಿದ ನ್ಯಾಯವಾದಿ ಎಂ ಜಿ ಮಠಪತಿ ನ್ಯಾಯವನ್ನು ತ್ವರಿತವಾಗಿ ನೀಡುವ ಉದ್ದೇಶದಿಂದಲೇ ಡಿಜಿಟಲ್ ಮಾಧ್ಯಮದ ಮೂಲಕ ಮಾಡುವುದು ಕೆಲವೊಂದು ಪ್ರಕರಣಗಳಲ್ಲಿ ಮಾತ್ರ ಔಚಿತ್ಯವೆನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಜಯಪುರದ ಗ್ರಾಹಕರ ದೂರು ಪರಿಹಾರ ವೇದಿಕೆ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಗಲಗಲಿ ಅವರು ಅಧ್ಯಕ್ಷ ನುಡಿ ನುಡಿದ ಅವರು,ಗ್ರಾಹಕರ ವೇದಿಕೆಯಿಂದ ಗ್ರಾಹಕರಿಗೆ ಇರುವ ಸೌಲಭ್ಯವು ಮತ್ತು ಗ್ರಾಹಕರು ಮೋಸಕ್ಕೊಳಗಾದ ಸಂದರ್ಭದಲ್ಲಿ ಯಾವ ರೀತಿ ದೂರನ್ನು ಸಲ್ಲಿಸಬೇಕೆಂದು ವಿಸ್ತೃತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಿಕ್ಯಾಬ್ ಸಂಸ್ಥೆ ನಿರ್ದೇಶಕ ಅಲಾವುದ್ದೀನ್ ಪುಣೇಕರ ಅವರು ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕ ವಿನಯ ಕುಮಾರ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್ ಪಾಟೀಲ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಆರ್ ಡಿ ಚೌಗಲಾ, ಡಾ. ಎಸ್ ಎಂ ಕರೆಕಲ್, ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಮೈತ್ರಿ ನಿರೂಪಿಸಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ನಾಮದೇವ ಚವ್ಹಾಣ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande