
ರಾಯಚೂರು, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಲೆಕ್ಕಚಾರವು ನಮ್ಮ ದೈನಂದಿನ ಬದುಕಿಗೆ ಬಹುಮುಖ್ಯ ಹೀಗಾಗಿ ಗಣಿತದ ಮಹತ್ವದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಮತ್ತು ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಅದನ್ನು ಸ್ಮರಿಸಲು ಹಾಗೂ ಸಾಧನೆಗಳನ್ನು ಗೌರವಿಸಲು ಇಂದು ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಪದ್ಮನಾಭ ರೆಡ್ಡಿ ಅವರು ಹೇಳಿದ್ದಾರೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗಣಿತ ವಿಭಾಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗಣಿತ ದಿನ ಅಂಗವಾಗಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮತ್ತು ‘ಸಿಕ್ವೆನ್ಸ್ ಅಂಡ್ ಸಿರೀಸ್ ಆಫ್ ಫಂಕ್ಷನ್’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ರಾಮಾನುಜನ್ ಅವರ ಕಲಿಕೆ ಮತ್ತು ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗಲಿಲ್ಲ. ಇವರಿಗಿದ್ದ ಗಣಿತದ ಮೇಲಿನ ಪ್ರೀತಿ ಇವರ ಉನ್ನತ ಸಾಧನೆಗೆ ಮೆಟ್ಟಿಲಾಯಿತು. ಗಣಿತದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರು. ಅವರು ಅನೇಕ ಸಂಕೀರ್ಣ ಗಣಿತ ವಿಷಯಗಳ ಮೇಲೆ ಕೆಲಸ ಮಾಡಿದರು. ಸಂಖ್ಯಾ ಸಿದ್ಧಾಂತ, ಅನಂತ ಸರಣಿಗಳಂತಹ ವಿಷಯಗಳಲ್ಲಿ ಹೊಸ ಸೂತ್ರಗಳನ್ನು ಪರಿಚಯಿಸಿದರು. ಸುಮಾರು 3900 ಸೂತ್ರಗಳು ಮತ್ತು ಫಲಿತಾಂಶಗಳನ್ನು ಪ್ರಸ್ತುತಪಡಿಸಿದ ಕೀರ್ತಿ ರಾಮಾನುಜನ್ ಅವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಭಾಸ್ಕರ್ ಮಾತನಾಡಿ, ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಿಗೆ ಗಣಿತದ ಮಹತ್ವದ ಬಗ್ಗೆ ಶಿಕ್ಷಣ ನೀಡುವುದಾಗಿದೆ. ಗಣಿತದಲ್ಲಿ ಆಸಕ್ತಿಯನ್ನು ಹೆಚ್ಚಿಸುವುದು, ಸಂಶೋಧನೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿತ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಹನುಮಂತ, ಪೂರ್ಣಿಮಾ, ಲುಬುನಾ ಸಿದ್ದಿಕ್ವ, ಅಶ್ವಿನಿ ಪ್ರಾಸ್ತಾವಿಕ ಮಾತನಾಡಿದರು, ವಿದ್ಯಾರ್ಥಿಗಳಾದ ರೂಪ ಸ್ವಾಗತಿಸಿದರು, ಉಸ್ಮೀತ ನಿರೂಪಿಸಿದರು, ಮಹಾಲಕ್ಷ್ಮೀ ಅತಿಥಿಯನ್ನು ಪರಿಚಯಿಸಿದರು, ಸಂಜೀವ್ ವಂದಿಸಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್