


ಕಾರಟಗಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಕೆ.ಸಿ.ಟಿ.ಯು. ಟೆಕ್ಸಾಕ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ (ರ್ಯಾಂಪ್) ಯೋಜನೆಯಡಿಯಲ್ಲಿ ಜೇಡ್ ಮತ್ತು ಲೀನ್ (Zಇಆ & ಐeಚಿಟಿ) ಯೋಜನೆ ಕುರಿತು ಕಾರಟಗಿ ಪಟ್ಟಣದ ಸಿಂದನೂರು ರಸ್ತೆಯ ಭಾರತ ಪೆಟ್ರೋಲಿಯಂ ಬಂಕ್ ಹತ್ತಿರದ ರೈಸ್ ಮಿಲ್ ಅಸೋಸಿಯೇಷನ್ ಸಭಾ ಭವನದಲ್ಲಿ ಹಮ್ಮಿಕೊಂಡ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಾಗಾರವನ್ನು ಕಾರಟಗಿ ರೈಸ್ ಮಿಲ್ ಅಸೋಸಿಯೇಶನ್ ಅಧ್ಯಕ್ಷರಾದ ಎನ್. ಶ್ರೀನಿವಾಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ರೈಸ್ ಮಿಲ್ ಮಾಲೀಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸಹಾಯ, ಸೌಲಭ್ಯ ಮತ್ತು ಪ್ರೋತ್ಸಾಹಗಳನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ (ರ್ಯಾಂಪ್) ಯೋಜನೆಯಡಿಯಲ್ಲಿ ಜೇಡ್ & ಲೀನ್ ಪ್ರಮಾಣ ಪತ್ರಗಳು ಕಂಚು, ಬೆಳ್ಳಿ ಮತ್ತು ಚಿನ್ನ ಎಂಬ ಮೂರು ವಿಧದಲ್ಲಿದ್ದು, ಈ ಪ್ರಮಾಣ ಪತ್ರಗಳಿಗೆ ಕೈಗಾರಿಕಾ ನೀತಿ-2025-30ರಡಿ ರೂ. 5 ಲಕ್ಷದವರೆಗೆ ಸಹಾಯಧನ ಲಭ್ಯವಿದೆ. ಎಂ.ಎಸ್.ಎಂ.ಇ ಕ್ಷೇತ್ರವು ದೇಶದ ಜಿಡಿಪಿಯಲ್ಲಿ ಅಂದಾಜು ಶೇ. 30ರಷ್ಟು ಪಾಲನ್ನು ಹಾಗೂ ದೇಶದ ರಫ್ತಿನಲ್ಲಿ ಅಂದಾಜು ಶೇ. 45ರಷ್ಟು ಪಾಲನ್ನು ಒಳಗೊಂಡಿರುತ್ತದೆ ಮತ್ತು ಕೈಗಾರಿಕಾ ನೀತಿ 2025-30ರಲ್ಲಿ ನವದ್ಯೋಮಗಳಿಗೆ ಇರುವ ಪ್ರೋತ್ಸಾಹ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಠಿಸಲು ದೇಶದ ಆರ್ಥಿಕ ಪ್ರಗತಿಯಲ್ಲಿ ಭಾಗವಹಿಸಲು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕರು ಹಾಗೂ ಬೆಂಗಳೂರು ಟೆಕ್ಸಾಕ್ ಸಿ.ಇ.ಓ. ಮತ್ತು ಮುಖ್ಯ ಸಲಹೆಗಾರರಾದ ಸಿದ್ಧರಾಜು ಅವರು ಮಾತನಾಡಿ, ರ್ಯಾಂಪ್ ಯೋಜನೆಯಡಿ ಜೇಡ್ & ಲೀನ್ ಪ್ರಮಾಣ ಪತ್ರಗಳು ನಾವು ಉತ್ಪನ್ನ ಮಾಡಿದ ಉತ್ಪನ್ನಗಳಿಗೆ ಪಡೆಯಬಹುದಾಗಿದ್ದು, ಇವು ಪರಿಸರ ಸ್ನೇಹಿ ಆಗಿರುತ್ತವೆ. ಮಾರುಕಟ್ಟೆಯಲ್ಲಿ ನಿಮ್ಮದೇ ಉತ್ಪನ್ನಗಳಿಗೆ ಸ್ವಂತ ಬ್ರ್ಯಾಂಡ್ ರೂಪಿಸಿ, ಡಿಜಟಲೀಕರಣ ಮಾಡಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಸದರಿ ಕಾರ್ಯಕ್ರಮ ಪ್ರಯೋಜನಕಾರಿಯಾಗಿದ್ದು ನಂತರ ಎಂ.ಎಸ್.ಎಂ.ಇ.ಕ್ಷೇತ್ರವು ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದ್ದು ಹಾಗೂ ಹೆಚ್ಚಿನ ಲಾಭಾಂಶ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರಟಗಿ ರೈಸ್ ಮಿಲ್ ಅಸೋಸಿಯೇಶನ್ ಕಾರ್ಯದರ್ಶಿ ಗುರುರಾಜ್ ಮತ್ತು ಸಣ್ಣವೀರೇಶಪ್ಪ ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾರಟಗಿ ರೈಸ್ ಮಿಲ್ ಅಸೋಸಿಯೇಷನ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್