ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲೀಯರ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಧ್ವಂಸ
ಸುಕ್ಮಾ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಕ್ರಮ ನಕ್ಸಲೀಯರ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ತಯಾರಿಕಾ ಕಾರ್ಖಾನೆಯನ್ನು ಪತ್ತೆ ಹಚ್ಚಿ ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಂಟು ಸಿಂ
Naxal


ಸುಕ್ಮಾ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಕ್ರಮ ನಕ್ಸಲೀಯರ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ತಯಾರಿಕಾ ಕಾರ್ಖಾನೆಯನ್ನು ಪತ್ತೆ ಹಚ್ಚಿ ಸಂಪೂರ್ಣವಾಗಿ ನಾಶಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಎಂಟು ಸಿಂಗಲ್-ಶಾಟ್ ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ತಯಾರಿಕಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 185ನೇ ಬೆಟಾಲಿಯನ್‌ನ GF ಕಂಪನಿ ಮತ್ತು ಸುಕ್ಮಾ ಜಿಲ್ಲಾ ಪೊಲೀಸರ ಜಂಟಿ ತಂಡ ಡಿಸೆಂಬರ್ 21ರಂದು ಶೋಧ ಕಾರ್ಯಾಚರಣೆ ನಡೆಸಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಚವಾಣ್ ಸೋಮವಾರ ತಿಳಿಸಿದ್ದಾರೆ.

ಈ ವೇಳೆ ಮೀನಘಟ್ಟ ಗ್ರಾಮದ ವ್ಯಾಪ್ತಿಯ ದಟ್ಟ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ನಕ್ಸಲೀಯರು ನಡೆಸುತ್ತಿದ್ದ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಪತ್ತೆಯಾಗಿದ್ದು, ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಭದ್ರತಾ ಪಡೆಗಳಿಗೆ ಭಾರಿ ಹಾನಿ ಉಂಟು ಮಾಡುವ ಉದ್ದೇಶದಿಂದ ನಕ್ಸಲೀಯರು ಇಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ತಯಾರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕಾರ್ಖಾನೆಯ ಸ್ಥಳದಿಂದ ಎಂಟು ಸಿಂಗಲ್-ಶಾಟ್ ರೈಫಲ್‌ಗಳು, ಶಸ್ತ್ರಾಸ್ತ್ರ ತಯಾರಿಕೆಗೆ ಬಳಸುವ ಯಂತ್ರೋಪಕರಣಗಳು, ಬಂದೂಕು ಭಾಗಗಳು, ಹೆಚ್ಚಿನ ಪ್ರಮಾಣದ ಸ್ಫೋಟಕಗಳು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳ ತ್ವರಿತ ಹಾಗೂ ಜಾಗರೂಕ ಕಾರ್ಯಾಚರಣೆಯಿಂದ ಈ ನಕ್ಸಲೀಯ ಚಟುವಟಿಕೆಯನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲಾಗಿದೆ ಎಂದು ಎಸ್‌ಪಿ ಚವಾಣ್ ಹೇಳಿದರು.

ಸುಕ್ಮಾ ಪೊಲೀಸರ ಹೊಸ ಕಾರ್ಯತಂತ್ರ ಮತ್ತು ಸಂಘಟಿತ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ನಕ್ಸಲೀಯರ ಜಾಲದ ಮೇಲೆ ನಿರಂತರ ಹಾಗೂ ಪರಿಣಾಮಕಾರಿ ಒತ್ತಡ ಹೇರುತ್ತಿವೆ ಎಂದು ಅವರು ಹೇಳಿದರು.

2024ರಿಂದ ಇದುವರೆಗೆ 599 ನಕ್ಸಲೀಯರು ಶರಣಾಗಿ ಮುಖ್ಯವಾಹಿನಿಗೆ ಸೇರಿದ್ದು, 460 ಜನರನ್ನು ಬಂಧಿಸಲಾಗಿದೆ. ಎನ್‌ಕೌಂಟರ್‌ಗಳಲ್ಲಿ 71 ನಕ್ಸಲೀಯರು ಹತರಾಗಿದ್ದಾರೆ. ಉಳಿದ ನಕ್ಸಲೀಯರ ಮೇಲೆ ನಿರಂತರ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದರು.

ಬಸ್ತಾರ್ ಪ್ರದೇಶದಲ್ಲಿ ಶಾಂತಿ, ಕಾನೂನು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಸುಕ್ಮಾ ಪೊಲೀಸರು ಸಂಪೂರ್ಣವಾಗಿ ಬದ್ಧರಾಗಿದ್ದು, ನಕ್ಸಲೀಯರ ಹಿಂಸಾತ್ಮಕ ಚಟುವಟಿಕೆಗಳು ಹಾಗೂ ಅವರ ಪೂರೈಕೆ ಜಾಲವನ್ನು ಬೇರುಸಹಿತ ಕಿತ್ತುಹಾಕುವ ಕಾರ್ಯಾಚರಣೆಗಳು ಮುಂದುವ ರಿ ಯಲಿವೆ ಎಂದು ಎಸ್‌ಪಿ ಚವಾಣ್ ಸ್ಪಷ್ಟಪಡಿಸಿದರು.

ವಶಪಡಿಸಿಕೊಂಡ ವಸ್ತುಗಳು:

08 ಸಿಂಗಲ್-ಶಾಟ್ ರೈಫಲ್‌ಗಳು, 15 (12 ಬೋರ್) ಕಾರ್ಟ್ರಿಡ್ಜ್‌ಗಳು, 05 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, 30 ಮೀಟರ್ ಕಾರ್ಡೆಕ್ಸ್ ವೈರ್, 01 ಮಲ್ಟಿಮೀಟರ್, 30 ಮೀಟರ್ ಸೇಫ್ಟಿ ಫ್ಯೂಸ್, 02 ಕೆಜಿ ಪಿಇಕೆ ಸ್ಫೋಟಕ, 01 ಕೆಜಿ ಎಎನ್‌ಎಫ್‌ಒ ಸ್ಫೋಟಕ, 10 ಕೆಜಿ ಅಮೋನಿಯಂ ನೈಟ್ರೇಟ್, 08 ವೈರ್‌ಲೆಸ್ ವಿಹೆಚ್‌ಎಫ್ ಸೆಟ್‌ಗಳು, 01 ವೆಲ್ಡಿಂಗ್ ಯಂತ್ರ, 01 ಕಟ್ಟರ್ ಯಂತ್ರ, ನಕ್ಸಲೈಟ್ ಸಮವಸ್ತ್ರಗಳು ಹಾಗೂ ಅವುಗಳ ತಯಾರಿಕಾ ಸಾಮಗ್ರಿಗಳು, ನಕ್ಸಲೈಟ್ ಸಾಹಿತ್ಯ ಮತ್ತು ಶಂಕಿತ ಶಸ್ತ್ರಾಸ್ತ್ರಗಳು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande