
ನವದೆಹಲಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಹಾಗೂ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಸೋಮವಾರ ದೂರವಾಣಿ ಸಂಭಾಷಣೆಯ ವೇಳೆ ಈ ಮಹತ್ವದ ಒಪ್ಪಂದವನ್ನು ಜಂಟಿಯಾಗಿ ಘೋಷಿಸಿದರು.
ಪ್ರಧಾನಿ ಕಚೇರಿಯ ಮಾಹಿತಿ ಪ್ರಕಾರ, ಮಾರ್ಚ್ 2025ರಲ್ಲಿ ಪ್ರಧಾನಿ ಲಕ್ಸನ್ ಅವರ ಭಾರತ ಭೇಟಿ ಸಂದರ್ಭದಲ್ಲಿ ಆರಂಭಗೊಂಡ ಈ FTA ಕೇವಲ ಒಂಬತ್ತು ತಿಂಗಳಲ್ಲಿ ಪೂರ್ಣಗೊಂಡಿದ್ದು, ಉಭಯ ದೇಶಗಳ ನಡುವಿನ ಗಾಢ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವುದರ ಜೊತೆಗೆ, ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಿ ಕಾರ್ಯತಂತ್ರದ ಸಹಕಾರಕ್ಕೆ ಹೊಸ ದಿಕ್ಕು ನೀಡಲಿದೆ.
ಈ FTA ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತ–ನ್ಯೂಜಿಲೆಂಡ್ ನಡುವಿನ ವ್ಯಾಪಾರ ದ್ವಿಗುಣಗೊಳ್ಳುವ ನಿರೀಕ್ಷೆಯಿದ್ದು, ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಸುಮಾರು 20 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಹೂಡಿಕೆ ಹರಿದುಬರುವ ವಿಶ್ವಾಸವನ್ನು ಉಭಯ ನಾಯಕರು ವ್ಯಕ್ತಪಡಿಸಿದರು. ಈ ಒಪ್ಪಂದವು ಹೂಡಿಕೆದಾರರು, ಉದ್ಯಮಿಗಳು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ವಿವಿಧ ವಲಯಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು.
ಕ್ರೀಡೆ, ಶಿಕ್ಷಣ ಮತ್ತು ಜನರಿಂದ ಜನರಿಗೆ ಸಂಪರ್ಕದಂತಹ ಕ್ಷೇತ್ರಗಳಲ್ಲಿ ಈಗಾಗಲೇ ಸಾಧಿಸಿರುವ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು. ಭಾರತ–ನ್ಯೂಜಿಲೆಂಡ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ನಿರಂತರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.
ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವನ್ನು ಉಭಯ ದೇಶಗಳ ಸಂಬಂಧಗಳಲ್ಲಿ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಇದು ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದರು.
“ಈ FTA ಮುಂದಿನ ಐದು ವರ್ಷಗಳಲ್ಲಿ ವ್ಯಾಪಾರವನ್ನು ದ್ವಿಗುಣಗೊಳಿಸುವ ದಾರಿ ಮಾಡಿಕೊಡುತ್ತದೆ. ನ್ಯೂಜಿಲೆಂಡ್‌ನಿಂದ 20 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೂ ಹೆಚ್ಚಿನ ಹೂಡಿಕೆಯನ್ನು ಭಾರತ ಸ್ವಾಗತಿಸುತ್ತದೆ. ನಮ್ಮ ಪ್ರತಿಭಾನ್ವಿತ ಯುವಕರು, ಬಲಿಷ್ಠ ನವೋದ್ಯಮ ಪರಿಸರ ವ್ಯವಸ್ಥೆ ಮತ್ತು ಸುಧಾರಣಾ ಚಾಲಿತ ಆರ್ಥಿಕತೆಯು ದೀರ್ಘಕಾಲೀನ ಹಾಗೂ ನಾವೀನ್ಯತೆಯ ಪಾಲುದಾರಿಕೆಗೆ ಬಲವಾದ ಅಡಿಪಾಯವಾಗಿದೆ,” ಎಂದು ಅವರು ಹೇಳಿದರು.
ಇದು ಭಾರತ–ನ್ಯೂಜಿಲೆಂಡ್ ಸಂಬಂಧಗಳಿಗೆ ಮಹತ್ವದ ಕ್ಷಣವಾಗಿದ್ದು, ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳಿಗೆ ಹೊಸ ವೇಗ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa