
ಮೈಸೂರು, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದು ಒಪ್ಪಲೇಬೇಕಾದ ವಿಚಾರ. ಯಾರೂ ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಮತ್ತು ಒಗ್ಗಟ್ಟು ಪ್ರಮುಖವಾಗಿದ್ದು, ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಈ ವಿಷಯವನ್ನು ರಾಹುಲ್ ಗಾಂಧಿಯವರೇ ತೀರ್ಮಾನಿಸಬೇಕು. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವು ಸಂಪೂರ್ಣವಾಗಿ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ನಾವು ಈ ವಿಚಾರವನ್ನು ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.
ನಾಯಕತ್ವ ಬದಲಾವಣೆ ವಿಚಾರವನ್ನು ಮಾಧ್ಯಮಗಳೇ ಅನಗತ್ಯವಾಗಿ ಹೆಚ್ಚಾಗಿ ಚರ್ಚಿಸುತ್ತಿವೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಸಭೆಯಲ್ಲಿ ಈ ಬಗ್ಗೆ ಈಗಾಗಲೇ ಹೇಳಿದ ಬಳಿಕ ಮತ್ತೆ ಮತ್ತೆ ಪ್ರಶ್ನೆ ಮಾಡುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದರೆ ತಪ್ಪೇನು?
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಭೇಟಿ ಮಾಡಿದರೆ ತಪ್ಪೇನು? ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರು. ಅವರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa