
ನವದೆಹಲಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-887 ಇಂದು ಬೆಳಿಗ್ಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
ನಿಗದಿತ ಸಮಯಕ್ಕೆ ದೆಹಲಿಯಿಂದ ಹಾರಿದ್ದ ವಿಮಾನವು ಗಗನಕ್ಕೆ ಏರಿದ ಬಳಿಕ ಕಾಕ್‌ಪಿಟ್‌ನಲ್ಲಿ ತಾಂತ್ರಿಕ ದೋಷದ ಸೂಚನೆ ಕಂಡುಬಂದಿತು. ತಕ್ಷಣ ಎಚ್ಚರಿಕೆ ವಹಿಸಿದ ಪೈಲಟ್‌ಗಳು ವಿಮಾನವನ್ನು ಹಿಂತಿರುಗಿಸುವ ನಿರ್ಧಾರ ಕೈಗೊಂಡರು. ನಂತರ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಕ್ತಾರರು, “ಪ್ರಯಾಣಿಕರ ಸುರಕ್ಷತೆ ನಮ್ಮ ಅತ್ಯಂತ ಪ್ರಮುಖ ಆದ್ಯತೆ. ತಾಂತ್ರಿಕ ದೋಷದ ಶಂಕೆಯಿಂದ ವಿಮಾನವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಹಿಂತಿರುಗಿಸಲಾಗಿದೆ” ಎಂದು ತಿಳಿಸಿದ್ದಾರೆ. ಮುಂಬೈಗೆ ತೆರಳಬೇಕಿದ್ದ ವಿಮಾನಯಾನವನ್ನು ರದ್ದುಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa