
ನಾಗಾಂವ್, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಸ್ಸಾಂನ ಲುಮ್ಡಿಂಗ್ ವಿಭಾಗದ ಕಂಪೂರ್–ಜಮುನಾಮುಖ್ ರೈಲ್ವೆ ಮಾರ್ಗದ ಚಂಗುರೈ ಪ್ರದೇಶದಲ್ಲಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ದುರಂತವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ರೈಲ್ವೆ ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ವೇಗವಾಗಿ ಬಂದ ರಾಜಧಾನಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿ ಗೊಂದಲ ಮತ್ತು ಅವ್ಯವಸ್ಥೆ ಉಂಟಾಯಿತು. ಈ ಪ್ರದೇಶವನ್ನು ಆನೆ ಸಂಚಾರಕ್ಕೆ ಸೂಕ್ಷ್ಮ ವಲಯವೆಂದು ಗುರುತಿಸಲಾಗಿದ್ದು, ಘಟನೆ ಹಲವು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಮತ್ತು ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಪರಿಣಾಮ ಕೆಲಕಾಲ ರೈಲು ಸಂಚಾರಕ್ಕೆ ಅಡಚಣೆ ಉಂಟಾದರೂ, ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ರೈಲಿನ ವೇಗ ನಿಯಂತ್ರಣ, ಮುಂಚಿತ ಎಚ್ಚರಿಕೆ ವ್ಯವಸ್ಥೆಗಳ ಪರಿಣಾಮಕಾರಿತ್ವ ಹಾಗೂ ರೈಲ್ವೆ–ಅರಣ್ಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸುವ ಉದ್ದೇಶದಿಂದ ಪ್ರಕರಣದ ಕುರಿತು ಇಲಾಖಾ ಮಟ್ಟದ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa