
ನವದೆಹಲಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿದ್ದು, ಕೋಟ್ಯಂತರ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಬೆಳಿಗ್ಗೆ 11.15ರ ಸುಮಾರಿಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ಪ್ರಧಾನಿ ಮೋದಿ ಸುಮಾರು ₹3,200 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿರಲಿದ್ದಾರೆ.
ನಾಡಿಯಾ ಜಿಲ್ಲೆಯಲ್ಲಿ NH-34ರ 66.7 ಕಿ.ಮೀ ಉದ್ದದ ಬಾರಾಜಗುಲಿ–ಕೃಷ್ಣನಗರ ವಿಭಾಗದ ಚತುಷ್ಪಥ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದು, ಉತ್ತರ 24 ಪರಗಣ ಜಿಲ್ಲೆಯಲ್ಲಿ NH-34ರ 17.6 ಕಿ.ಮೀ ಉದ್ದದ ಬಾರಾಜಸತ್–ಬಾರಾಜಗುಲಿ ವಿಭಾಗದ ಚತುಷ್ಪಥ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಬಂಗಾಳ ಕಾರ್ಯಕ್ರಮಗಳ ನಂತರ ಪ್ರಧಾನಿ ಮೋದಿ ಮಧ್ಯಾಹ್ನ 2.30ರ ಸುಮಾರಿಗೆ ಗುವಾಹಟಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಸ್ಸಾಂ ಭೇಟಿಯ ವೇಳೆ ಅವರು ರಾಜ್ಯಕ್ಕೆ ₹1,600 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಗುವಾಹಟಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಹೊರಭಾಗದಲ್ಲಿ ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೊಲೊಯ್ ಅವರ 80 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಗೋಪಿನಾಥ್ ಬೋರ್ಡೊಲೊಯ್ ಅವರ ಹೆಸರಿನಲ್ಲೇ ನಿರ್ಮಿಸಲಾದ ಈ ಹೊಸ ಟರ್ಮಿನಲ್ ಅನ್ನು ಸುಮಾರು ₹4,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa