
ನವದೆಹಲಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶನಿವಾರ ಬೆಳಗಿನ ಜಾವದಿಂದಲೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು ದಟ್ಟವಾದ ಮಂಜು ಆವರಿಸಿದ್ದು, ದೈನಂದಿನ ಜೀವನದ ಜೊತೆಗೆ ವಿಮಾನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಮಂಜಿನಿಂದಾಗಿ ಗೋಚರತೆ ಶೂನ್ಯ ಮಟ್ಟಕ್ಕೆ ಇಳಿದಿರುವುದರಿಂದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ.
ಮಂಜಿನ ಪರಿಣಾಮ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಒಟ್ಟು 130ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ, 66 ಆಗಮನ ಮತ್ತು 63 ನಿರ್ಗಮನ ವಿಮಾನಗಳನ್ನು ಶನಿವಾರ ರದ್ದುಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿದ್ದು, ಕಡಿಮೆ ಗೋಚರತೆಯ ಕಾರ್ಯವಿಧಾನಗಳು ಜಾರಿಯಲ್ಲಿವೆ ಎಂದು ತಿಳಿಸಿದೆ. ಪರಿಸ್ಥಿತಿ ಹಂತಹಂತವಾಗಿ ಸುಧಾರಿಸುತ್ತಿದ್ದರೂ, ಕೆಲವು ವಿಮಾನಗಳಲ್ಲಿ ವಿಳಂಬ ಸಾಧ್ಯತೆ ಇರುವುದಾಗಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ವಿವಿಧ ವಿಮಾನಯಾನ ಸಂಸ್ಥೆಗಳೂ ಸಹ ಮಂಜಿನಿಂದ ಉಂಟಾಗುವ ವಿಳಂಬಗಳ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿವೆ. ಇಂಡಿಗೋ ಏರ್‌ಲೈನ್ಸ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ದೆಹಲಿ, ರಾಂಚಿ, ಜಮ್ಮು ಮತ್ತು ಹಿಂಡನ್ ವಿಮಾನ ನಿಲ್ದಾಣಗಳಲ್ಲಿ ಕಡಿಮೆ ಗೋಚರತೆ ಮತ್ತು ಮಂಜು ವಿಮಾನ ವೇಳಾಪಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹವಾಮಾನ ಪರಿಸ್ಥಿತಿಯನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದೆ.
ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳುವಂತೆ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa