
ನವದೆಹಲಿ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗುಜರಾತ್‌ನ ಸೂರತ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ನವೆಂಬರ್‌ನಲ್ಲಿ ನಡೆಸಿದ ಸ್ವತಂತ್ರ ಡ್ರೈವ್ ಟೆಸ್ಟ್ (Independent Drive Test – IDT) ವರದಿಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಟಿಸಿದೆ. ವರದಿ ಪ್ರಕಾರ, ಧ್ವನಿ ಮತ್ತು ಡೇಟಾ ಸೇವೆಗಳಲ್ಲಿ ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್ ಉತ್ತಮ ಪ್ರದರ್ಶನ ನೀಡಿದ್ದು, ವಿಶೇಷವಾಗಿ 5G ಮತ್ತು 4G ಡೇಟಾ ವೇಗದಲ್ಲಿ ಜಿಯೋ ಮುಂಚೂಣಿಯಲ್ಲಿದೆ.
ಕೇಂದ್ರ ಸಂವಹನ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯಂತೆ, 2G ಮತ್ತು 3G ಧ್ವನಿ ಸೇವೆಗಳ ಕರೆ ಯಶಸ್ಸಿನ ದರದಲ್ಲಿ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್–ಐಡಿಯಾ (Vi) ಶೇ.100ರಷ್ಟು ಸಾಧನೆ ಮಾಡಿವೆ. ಏರ್‌ಟೆಲ್‌ನ ಕರೆ ಯಶಸ್ಸಿನ ದರ ಶೇ.99.55 ಆಗಿದ್ದು, ಬಿಎಸ್‌ಎನ್‌ಎಲ್ ಶೇ.92.82 ದಾಖಲಿಸಿದೆ. ಕರೆ ಕಡಿತ (ಡ್ರಾಪ್ಡ್ ಕಾಲ್) ದರದಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್–ಐಡಿಯಾ ಶೂನ್ಯ ಪ್ರಮಾಣವನ್ನು ದಾಖಲಿಸಿದರೆ, ಜಿಯೋದಲ್ಲಿ ಶೇ.0.15 ಮತ್ತು ಬಿಎಸ್‌ಎನ್‌ಎಲ್‌ನಲ್ಲಿ ಶೇ.4.10 ಕರೆಗಳು ಕಡಿತಗೊಂಡಿವೆ.
ಕರೆ ಗುಣಮಟ್ಟವನ್ನು ಅಳೆಯುವ ಸರಾಸರಿ ಅಭಿಪ್ರಾಯ ಅಂಕ (Mean Opinion Score – MOS)ದಲ್ಲಿ ವೊಡಾಫೋನ್–ಐಡಿಯಾ 4.48 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.
ಡೇಟಾ ಸೇವೆಗಳ ಸ್ವಯಂ-ಆಯ್ಕೆ ಮೋಡ್ (5G/4G/3G/2G) ಪರೀಕ್ಷೆಯಲ್ಲಿ ರಿಲಯನ್ಸ್ ಜಿಯೋ ಸರಾಸರಿ 279.36 Mbps ಡೌನ್‌ಲೋಡ್ ವೇಗದೊಂದಿಗೆ ಮೊದಲ ಸ್ಥಾನದಲ್ಲಿದೆ. ಏರ್‌ಟೆಲ್ 149.11 Mbps, ವೊಡಾಫೋನ್–ಐಡಿಯಾ 45.02 Mbps ಮತ್ತು ಬಿಎಸ್‌ಎನ್‌ಎಲ್ 4.83 Mbps ಡೌನ್‌ಲೋಡ್ ವೇಗ ದಾಖಲಿಸಿವೆ. ಅಪ್‌ಲೋಡ್ ವೇಗದಲ್ಲಿಯೂ ಜಿಯೋ 46.54 Mbps ನೊಂದಿಗೆ ಮುಂಚೂಣಿಯಲ್ಲಿದೆ. ವಿಳಂಬ (Latency) ಕಾರ್ಯಕ್ಷಮತೆಯಲ್ಲೂ ವೊಡಾಫೋನ್–ಐಡಿಯಾ ಹಾಗೂ ಜಿಯೋ ಇತರ ಸೇವಾ ಪೂರೈಕೆದಾರರಿಗಿಂತ ಉತ್ತಮ ಪ್ರದರ್ಶನ ನೀಡಿವೆ.
TRAIಯ ಜೈಪುರ ಪ್ರಾದೇಶಿಕ ಕಚೇರಿಯಿಂದ ನಿಯೋಜಿಸಲ್ಪಟ್ಟ ಏಜೆನ್ಸಿಯು ನವೆಂಬರ್ 3ರಿಂದ 7ರ ವರೆಗೆ ಗುಜರಾತ್ ಪರವಾನಗಿ ಪ್ರದೇಶದಲ್ಲಿ ಈ ಡ್ರೈವ್ ಟೆಸ್ಟ್ ನಡೆಸಿತು. ಪರೀಕ್ಷೆಯು 412 ಕಿಲೋಮೀಟರ್ ನಗರ ಡ್ರೈವ್, 14 ಹಾಟ್‌ಸ್ಪಾಟ್ ಸ್ಥಳಗಳು ಹಾಗೂ 2 ಕಿಲೋಮೀಟರ್ ವಾಕ್ ಟೆಸ್ಟ್ ಅನ್ನು ಒಳಗೊಂಡಿತ್ತು. ಡೈಮಂಡ್ ನಗರ, ಉದ್ನಾ, ಭೇಸ್ತಾನ್, ಸಚಿನ್, ಪಾಂಡೇಸರ, ವೆಸು, ಅದಜನ್, ರಾಂಡರ್, ಕತರ್ಗಮ್, ಮೋಟಾ ವರಾಚಾ, ನ್ಯೂ ಸಿಟಿ ಲೈಟ್ ಮತ್ತು ಪಾರ್ಲೆ ಪಾಯಿಂಟ್ ಸೇರಿದಂತೆ ಸೂರತ್ ನಗರದ ಪ್ರಮುಖ ವಾಣಿಜ್ಯ ಹಾಗೂ ವಸತಿ ಪ್ರದೇಶಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa