ಏಕತಾ ಪ್ರತಿಮೆ ಶಿಲ್ಪಿ ರಾಮ್ ಸುತಾರ್ ನಿಧನ
ನೋಯ್ಡಾ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯ ಶಿಲ್ಪಿ, ಖ್ಯಾತ ಶಿಲ್ಪಕಲಾವಿದ ರಾಮ್ ಸುತಾರ್ ಅವರು ಬುಧವಾರ ತಡರಾತ್ರಿ ದೆಹಲಿ-ಎನ್‌ಸಿಆರ್‌ನ ನೋಯ್ಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. 100 ವರ್ಷದ ಸುತಾರ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ
Sutaar


ನೋಯ್ಡಾ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯ ಶಿಲ್ಪಿ, ಖ್ಯಾತ ಶಿಲ್ಪಕಲಾವಿದ ರಾಮ್ ಸುತಾರ್ ಅವರು ಬುಧವಾರ ತಡರಾತ್ರಿ ದೆಹಲಿ-ಎನ್‌ಸಿಆರ್‌ನ ನೋಯ್ಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. 100 ವರ್ಷದ ಸುತಾರ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

“ನನ್ನ ತಂದೆ ಶ್ರೀ ರಾಮ್ ವಂಜಿ ಸುತಾರ್ ಅವರು ಡಿಸೆಂಬರ್ 17ರ ಮಧ್ಯರಾತ್ರಿ ನಮ್ಮ ನಿವಾಸದಲ್ಲಿ ವಿಧಿವಶರಾದರು” ಎಂದು ಅವರ ಪುತ್ರ ಹಾಗೂ ಶಿಲ್ಪಕಲಾವಿದ ಅನಿಲ್ ಸುತಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಾಮ್ ಸುತಾರ್ ಅವರು ಫೆಬ್ರವರಿ 19, 1925ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದರು. ವಿನಮ್ರ ಹಿನ್ನೆಲೆಯಿಂದ ಬಂದ ಅವರು ಬಾಲ್ಯದಿಂದಲೇ ಶಿಲ್ಪಕಲೆಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಮುಂಬೈನ ಪ್ರತಿಷ್ಠಿತ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್‌ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಚಿನ್ನದ ಪದಕವನ್ನು ಪಡೆದರು.

ಅನಂತರ ಭಾರತೀಯ ಶಿಲ್ಪಕಲೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ದೀರ್ಘ ಮತ್ತು ಮಹತ್ವದ ಸೃಜನಶೀಲ ಪಯಣವನ್ನು ಆರಂಭಿಸಿದರು. ನವದೆಹಲಿಯ ಸಂಸತ್ ಸಂಕೀರ್ಣದಲ್ಲಿ ಸ್ಥಾಪಿತವಾಗಿರುವ ಧ್ಯಾನಸ್ಥ ಭಂಗಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಕುದುರೆಯ ಮೇಲೆ ಕುಳಿತಿರುವ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸೇರಿದಂತೆ ಅನೇಕ ಐತಿಹಾಸಿಕ ಶಿಲ್ಪಗಳು ಅವರ ಕೈಚಾಣಾಕ್ಷತೆಗೆ ಸಾಕ್ಷಿಯಾಗಿವೆ.

ಗುಜರಾತ್‌ನ ಕೆವಾಡಿಯಾದಲ್ಲಿ ನರ್ಮದಾ ನದಿಯ ತೀರದಲ್ಲಿ ಸ್ಥಾಪಿತಗೊಂಡಿರುವ ಏಕತಾ ಪ್ರತಿಮೆ ಅವರ ಜೀವನದ ಮಹಾಪ್ರತಿಮೆಯಾಗಿದೆ. ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿತವಾದ ಈ ಪ್ರತಿಮೆ 182 ಮೀಟರ್ ಎತ್ತರ ಹೊಂದಿದ್ದು, ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿ ಭಾರತದ ಏಕತೆ ಮತ್ತು ಅಖಂಡತೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರತಿಮೆ ರಾಮ್ ಸುತಾರ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಗೌರವ ಮತ್ತು ಖ್ಯಾತಿಯನ್ನು ತಂದಿತು.

ಅವರ ಅನನ್ಯ ಕೊಡುಗೆಗೆ ಗೌರವವಾಗಿ 1999ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಮಹಾರಾಷ್ಟ್ರ ಭೂಷಣ ನೀಡಿ ಸನ್ಮಾನಿಸಿತ್ತು.

ಭಾರತೀಯ ಶಿಲ್ಪಕಲೆಯ ಇತಿಹಾಸದಲ್ಲಿ ಅಜರಾಮರ ಹೆಸರಾಗಿ ಉಳಿಯುವ ರಾಮ್ ಸುತಾರ್ ಅವರ ನಿಧನವು ಕಲಾ ಲೋಕಕ್ಕೆ ಅಪಾರ ನಷ್ಟವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande