ವಿಧಾನ ಸಭೆಯಲ್ಲಿ ದ್ವೇಷ ಭಾಷಣ ವಿಧೇಯಕ ಅಂಗೀಕಾರ
ಬೆಳಗಾವಿ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ವಿಧಾನ ಸಭೆಯಲ್ಲಿ ಗದ್ದಲದ ನಡುವೆಯೇ ಅಂಗೀಕರಿಸಲಾಯಿತು. ಮಸೂದೆಗೆ ವಿರೋಧ ವ್ಯಕ್ತಪಡಿಸಿದ
LA bill approval


ಬೆಳಗಾವಿ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ವಿಧಾನ ಸಭೆಯಲ್ಲಿ ಗದ್ದಲದ ನಡುವೆಯೇ ಅಂಗೀಕರಿಸಲಾಯಿತು.

ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂಭಾಗ ಧರಣಿ ನಡೆಸಿ, ವಿಧೇಯಕದ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ನಡುವೆ ಸರ್ಕಾರ ಮಸೂದೆಯನ್ನು ಅಂಗೀಕರಿಸಿತು.

ಮಸೂದೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿವರ ನೀಡಿ, ಇತ್ತೀಚೆಗೆ ಸಮಾಜಕ್ಕೆ ನೋವುಂಟು ಮಾಡುವ ಮಾತುಗಳು ಹೆಚ್ಚಾಗುತ್ತಿದ್ದು, ಅದರ ಪರಿಣಾಮವಾಗಿ ಹಲ್ಲೆ, ಕೊಲೆಗಳಂತಹ ಘಟನೆಗಳು ನಡೆಯುತ್ತಿವೆ. ಸಾಮಾಜಿಕ ಹಾಗೂ ರಾಜಕೀಯ ಸಭೆಗಳಲ್ಲಿ ಆಡಲಾಗುವ ದ್ವೇಷದ ಮಾತುಗಳು ಸಮುದಾಯಗಳ ನಡುವೆ ಉದ್ವಿಗ್ನತೆ ಹುಟ್ಟುಹಾಕುತ್ತಿವೆ. ಇದನ್ನು ನಿಯಂತ್ರಿಸಲು ಕಾನೂನು ಅಗತ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ಮಸೂದೆಯಲ್ಲಿ ಪ್ರಸ್ತಾವಿತ ಶಿಕ್ಷೆ ಹಾಗೂ ವಿಧಿಗಳು:

ಮೊದಲ ಬಾರಿಗೆ ದ್ವೇಷ ಭಾಷಣ ಅಥವಾ ದ್ವೇಷ ಅಪರಾಧಕ್ಕೆ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷವರೆಗೆ ಜೈಲು ಮತ್ತು ₹50,000 ದಂಡ.

ಅಪರಾಧ ಪುನರಾವರ್ತನೆಯಾದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷವರೆಗೆ ಜೈಲು ಮತ್ತು ₹1 ಲಕ್ಷ ದಂಡ.

ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತವಾಗಿರುತ್ತವೆ.

ಈ ಹಿಂದೆ ಪುನರಾವರ್ತನೆಗೆ 10 ವರ್ಷ ಜೈಲು ಇದ್ದ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ವಿಪಕ್ಷಗಳ ಆಕ್ಷೇಪ:

ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜಕೀಯ ದ್ವೇಷ ತೀರಿಸಿಕೊಳ್ಳಲು ಈ ಕಾಯ್ದೆ ದುರುಪಯೋಗವಾಗುವ ಭೀತಿ ಇದೆ. ಪೊಲೀಸರಿಗೆ ಅತಿಯಾದ ಅಧಿಕಾರ ಸಿಗುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಭ್ರಷ್ಟಾಚಾರದಂತಹ ಗಂಭೀರ ಆರೋಪಗಳ ವರದಿಗೂ ಮಾಧ್ಯಮ ಪ್ರತಿನಿಧಿಗಳು ಜಾಮೀನು ಪಡೆಯಬೇಕಾದ ಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನು ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಟೀಕಿಸಿದರು.

ಸದನದಲ್ಲಿ ಕೋಲಾಹಲ:

ಇದೇ ವೇಳೆ ಸಚಿವ ಬೈರತಿ ಸುರೇಶ್ ಅವರ ಕರಾವಳಿ ಭಾಗದಲ್ಲಿ ನಡೆದಿರುವ ಘಟನೆಗಳ ಕುರಿತ ಹೇಳಿಕೆ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕರಾವಳಿ ಭಾಗದ ಶಾಸಕರು ಕೆರಳಿ ಸದನದ ಬಾವಿಗಿಳಿದರು. ನಂತರ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಮಸೂದೆಯನ್ನು ಪಾಸ್ ಮಾಡಿಕೊಂಡಿತು. ಈ ವೇಳೆ ಅಶೋಕ್ ಸೇರಿದಂತೆ ಹಲವರು ವಿಧೇಯಕದ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಯ ಪ್ರಮುಖ ಅಂಶಗಳು:

ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳಿಗೆ ಕ್ರಮ.

ದ್ವೇಷ ಭಾಷಣ ಪ್ರಕರಣಗಳ ವಿಚಾರಣೆಗೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ.

ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ (DSP) ದರ್ಜೆಗಿಂತ ಕಡಿಮೆ ಅಲ್ಲದ ಅಧಿಕಾರಿಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಅಧಿಕಾರ.

ನೋಂದಾಯಿತ ಹಾಗೂ ನೋಂದಾಯಿತವಲ್ಲದ ಸಂಘ–ಸಂಸ್ಥೆಗಳಿಗೂ ಹೊಣೆಗಾರಿಕೆ.

ದ್ವೇಷ ಭಾಷಣ ಸಂಬಂಧಿತ ಕಂಟೆಂಟ್‌ಗಳನ್ನು ಡೊಮೇನ್‌ನಿಂದ ಬ್ಲಾಕ್ ಮಾಡುವ ಅಥವಾ ತೆಗೆದುಹಾಕುವ ಅಧಿಕಾರ ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande