ನ್ಯಾಷನಲ್ ಹೆರಾಲ್ಡ್ ಪ್ರಕರಣ : ಸಂಸತ್ ಭವನದ ಆವರಣದಲ್ಲಿ ಪ್ರತಿ ಪಕ್ಷಗಳ ಪ್ರತಿಭಟನೆ
ಹಾಕಿ
Protest


ನವದೆಹಲಿ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆ, ಬುಧವಾರ ಸಂಸತ್ ಭವನದ ಸಂಕೀರ್ಣದ ಮಕರ ದ್ವಾರದ ಬಳಿ ಪ್ರತಿ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸೇರಿದಂತೆ ಪ್ರತಿ ಪಕ್ಷಗಳ ಸಂಸದರು, ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಕರೆದಿದ್ದು, ಸರ್ಕಾರದಿಂದ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಕ್ಷಮೆಯಾಚಿಸಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಸದರು ‘ಸತ್ಯಮೇವ ಜಯತೇ’ ಎಂಬ ಬರಹವಿರುವ ದೊಡ್ಡ ಬ್ಯಾನರ್ ಹಿಡಿದು, “ಪ್ರಧಾನಿ ಕ್ಷಮೆಯಾಚಿಸಲಿ”, “ಪ್ರಧಾನಿ ರಾಜೀನಾಮೆ ನೀಡಿ” ಎಂಬ ಘೋಷಣೆಗಳನ್ನು ಹಾಕಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಶಶಿ ತರೂರ್, ರಾಜೀವ್ ರಂಜನ್ ಪಪ್ಪು ಯಾದವ್ ಸೇರಿದಂತೆ ಅನೇಕ ಪ್ರತಿ ಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ನ್ಯಾಯಾಲಯದ ತೀರ್ಪಿನಿಂದ ಸತ್ಯ ಸ್ಪಷ್ಟವಾಗಿ ಹೊರಬಂದಿದೆ. ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇನ್ನಷ್ಟು ತೀವ್ರವಾಗಿ ಮುಂದುವರಿಸಲಿದ್ದಾರೆ” ಎಂದು ಹೇಳಿದರು.

ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, “ಜಾರಿ ನಿರ್ದೇಶನಾಲಯದ ದುರುಪಯೋಗಕ್ಕೆ ನ್ಯಾಯಾಲಯ ಸ್ಪಷ್ಟ ಉತ್ತರ ನೀಡಿದೆ. ಕಳೆದ 10 ವರ್ಷಗಳಿಂದ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸುಳ್ಳು ಪ್ರಚಾರ ನಡೆಸುತ್ತಿತ್ತು. ದೆಹಲಿ ನ್ಯಾಯಾಲಯದ ತೀರ್ಪು ಆ ಎಲ್ಲ ಸುಳ್ಳುಗಳನ್ನು ಬಹಿರಂಗಪಡಿಸಿದೆ” ಎಂದು ಹೇಳಿದರು.

ಇದೇ ವೇಳೆ ಶಿವಸೇನೆ (ಯುಬಿಟಿ) ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, “ಜಾರಿ ನಿರ್ದೇಶನಾಲಯವು ಸರ್ಕಾರದ ಕಾರ್ಯಸೂಚಿಯಂತೆ ಮಾತ್ರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಯಾವುದೇ ವಾಸ್ತವಿಕ ಆಧಾರ ಅಥವಾ ಸತ್ಯವಿಲ್ಲ. ಅದಕ್ಕಾಗಿಯೇ ನ್ಯಾಯಾಲಯಗಳು ಈ ಪ್ರಕರಣವನ್ನು ಪ್ರಶ್ನಿಸುತ್ತಿವೆ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande