
ನವದೆಹಲಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಒಟ್ಟು ಇಂಧನ ಅಗತ್ಯಗಳಲ್ಲಿ ಪರಮಾಣು ಶಕ್ತಿಯ ಪಾಲನ್ನು ಹೆಚ್ಚಿಸುವ ಉದ್ದೇಶದೊಂದಿಗೆ ರೂಪಿಸಲಾದ ಮಹತ್ವದ ಪರಮಾಣು ಇಂಧನ ಮಸೂದೆಯನ್ನು ಲೋಕಸಭೆ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿದೆ. ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವುದು, ವಿದ್ಯುತ್ ರಹಿತ ವಲಯಗಳಲ್ಲಿ ಅದರ ಬಳಕೆಯನ್ನು ವಿಸ್ತರಿಸುವುದು ಹಾಗೂ ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ತೆರೆಯುವುದು ಈ ಮಸೂದೆಯ ಪ್ರಮುಖ ಗುರಿಯಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ‘ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ ಮಸೂದೆ, 2025’ (ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಅಭಿವೃದ್ಧಿ – ಶಾಂತಿ ಮಸೂದೆ) ಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಲೋಕಸಭೆಯಲ್ಲಿ ಮಂಡಿಸಿದರು.
ಮಸೂದೆಯ ಮೇಲೆ ಸುದೀರ್ಘ ಚರ್ಚೆ ನಡೆದ ಬಳಿಕ ಪ್ರತಿಕ್ರಿಯಿಸಿದ ಡಾ. ಜಿತೇಂದ್ರ ಸಿಂಗ್, ಭಾರತದ ಪರಮಾಣು ಇಂಧನ ಸಂಬಂಧಿತ ಕಾನೂನುಗಳನ್ನು ಆಧುನೀಕರಿಸುವುದು ಮತ್ತು ಈ ವಲಯವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮಸೂದೆಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಇದು ಸಂಪೂರ್ಣವಾಗಿ ಹೊಸ ಮಸೂದೆಯಲ್ಲ ಈಗಿರುವ ಕಾನೂನುಗಳ ಕೆಲವು ಅಂಶಗಳಿಗೆ ತಿದ್ದುಪಡಿ ತರಲಾಗಿದೆ ಎಂದು ಅವರು ಹೇಳಿದರು. ಈ ಮಸೂದೆಯು ದೇಶದ ಅಭಿವೃದ್ಧಿ ಪಥಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಮಸೂದೆಯ ಸೆಕ್ಷನ್ 9 ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇನ್ನೊಂದು ವಿಭಾಗವು ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳ ಭಾಗವಹಿಸುವಿಕೆಯನ್ನು ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಅನೇಕ ವಿರೋಧ ಪಕ್ಷಗಳು ಮಸೂದೆಯನ್ನು ಸಂಪೂರ್ಣವಾಗಿ ಓದದೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಡಾ. ಸಿಂಗ್ ಟೀಕಿಸಿದರು. ಸರ್ಕಾರ ಮಸೂದೆಯ ಅಂಶಗಳನ್ನು ಸ್ಪಷ್ಟವಾಗಿ ವಿವರಿಸಿದ್ದು, ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅಗತ್ಯವಾದ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಒದಗಿಸಿದೆ ಎಂದರು.
ಈ ಮಸೂದೆಯು ಸುರಕ್ಷತೆ, ಭದ್ರತೆ, ರಕ್ಷಣಾ ಕ್ರಮಗಳು, ಗುಣಮಟ್ಟದ ಭರವಸೆ ಹಾಗೂ ತುರ್ತು ಸಿದ್ಧತೆಯ ಕುರಿತ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ, 1962ರ ಪರಮಾಣು ಶಕ್ತಿ ಕಾಯ್ದೆ ಹಾಗೂ 2010ರ ಪರಮಾಣು ಹಾನಿಗೆ ಸಂಬಂಧಿಸಿದ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾಯಿಸುವ ಮಹತ್ವದ ವಿಧೇಯಕವಾಗಿರುವುದು ಗಮನಾರ್ಹ.
ಪ್ರಸ್ತಾವಿತ ಕಾನೂನು ಸಾರ್ವಜನಿಕ–ಖಾಸಗಿ ಪಾಲುದಾರಿಕೆಗಳು (ಪಿಪಿಪಿ) ಮತ್ತು ಜಂಟಿ ಉದ್ಯಮಗಳ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಜೊತೆಗೆ, ದೊಡ್ಡ ಪ್ರಮಾಣದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ನಿಯೋಜನೆಯನ್ನು ಉತ್ತೇಜಿಸುವುದೂ ಇದರ ಉದ್ದೇಶವಾಗಿದೆ. ಈ ಮಸೂದೆಯನ್ನು ಸರ್ಕಾರ ಡಿಸೆಂಬರ್ 15ರಂದು ಲೋಕಸಭೆಯಲ್ಲಿ ಪರಿಚಯಿಸಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa