
ನವದೆಹಲಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ 43 ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಲೋಕ ಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಡಿಜಿಟಲ್ ವೇದಿಕೆಗಳಲ್ಲಿ ಕಾನೂನುಬಾಹಿರ ವಿಷಯಗಳ ಪ್ರಸಾರವನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಕಾಯ್ದೆ–2000 ಮತ್ತು ಐಟಿ ನಿಯಮಗಳು–2021 ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಚೌಕಟ್ಟು ಅಸ್ತಿತ್ವದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಟಿ ನಿಯಮಗಳು–2021ರ ಪ್ರಕಾರ, ಓಟಿಟಿ ಪ್ಲಾಟ್‌ಫಾರ್ಮ್‌ಗಳು ವಯಸ್ಸು ಆಧಾರಿತ ವಿಷಯ ವರ್ಗೀಕರಣ, ಮೂರು ಹಂತದ ದೂರು ಪರಿಹಾರ ವ್ಯವಸ್ಥೆ ಮತ್ತು ಕಾನೂನುಬಾಹಿರ ವಿಷಯವನ್ನು ನಿಗದಿತ ಅವಧಿಯಲ್ಲಿ ತೆರವುಗೊಳಿಸುವ ವ್ಯವಸ್ಥೆಯನ್ನು ಪಾಲಿಸಬೇಕಿದೆ. ಈ ನಿಯಮಗಳ ಉಲ್ಲಂಘನೆಯಾದಲ್ಲಿ ಮಧ್ಯವರ್ತಿಗಳಿಗೆ ದೊರಕುವ ಕಾನೂನು ವಿನಾಯಿತಿಗಳನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ.
ಸದ್ಯಕ್ಕೆ ಓಟಿಟಿ ವಿಷಯವನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ತಿಳಿಸಿದ್ದು, ಓಟಿಟಿ ವಲಯವನ್ನು ಐಟಿ ನಿಯಮಗಳ ಮೂಲಕವೇ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa