
ನವದೆಹಲಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಪ್ರಾಯದಂತೆ, ಬಹುಮತದ ಬಲದ ಮೇಲೆ ಜನಪ್ರಿಯ ಪ್ರಧಾನಿಯೊಬ್ಬರು ರಾಷ್ಟ್ರಪತಿ ಹುದ್ದೆಗೆ ಏರುವುದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸಂಕೇತವಲ್ಲ; ಅದು ಅತ್ಯಂತ ತಪ್ಪಾದ ಪರಂಪರೆಯಾಗಿ ರೂಪುಗೊಳ್ಳುತ್ತದೆ.
ಪ್ರಧಾನಿ ನರೇಂದ್ರ ಮೋದಿ 2027ರಲ್ಲಿ ರಾಷ್ಟ್ರಪತಿಯಾಗಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ, ವಾಜಪೇಯಿ ಅವರ ಈ ದೃಷ್ಟಿಕೋನವನ್ನು ಹಿರಿಯ ಪತ್ರಕರ್ತ ಅಶೋಕ್ ಟಂಡನ್ ಅವರು ಬರೆದಿರುವ ಪುಸ್ತಕದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಟಂಡನ್ ಅವರು ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಈ ಪುಸ್ತಕವನ್ನು ಬುಧವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು.
ಈ ವಿಚಾರಗಳ ಹಿನ್ನೆಲೆ 2002ರದ್ದು. ಆ ಸಮಯದಲ್ಲಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ/ರಾಜಗ) ಸರ್ಕಾರವು ಹೊಸ ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆ ಕುರಿತು ಚರ್ಚೆ ನಡೆಸುತ್ತಿತ್ತು. ಆ ವೇಳೆ ಲೇಖಕರು ಪ್ರಧಾನಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪುಸ್ತಕದಲ್ಲಿ ಅಶೋಕ್ ಟಂಡನ್ ಅವರು ಬರೆಯುವಂತೆ, ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಡಾ. ಪಿ.ಸಿ. ಅಲೆಕ್ಸಾಂಡರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಪರಿಗಣಿಸುವ ಪ್ರಯತ್ನಗಳು ನಡೆದಿದ್ದವು. ಪ್ರಧಾನಿ ಕಚೇರಿಯಲ್ಲಿದ್ದ ಒಬ್ಬ ಪ್ರಭಾವಿ ಸಹೋದ್ಯೋಗಿ ವೈಯಕ್ತಿಕವಾಗಿ ಡಾ. ಅಲೆಕ್ಸಾಂಡರ್ ಅವರ ಸಂಪರ್ಕದಲ್ಲಿದ್ದು, ತಾವು ವಾಜಪೇಯಿ ಅವರ ದೂತರಾಗಿರುವಂತೆ ವರ್ತಿಸುತ್ತಿದ್ದರು.
ಅದೇ ವ್ಯಕ್ತಿ, ಡಾ. ಅಲೆಕ್ಸಾಂಡರ್ ಕ್ರಿಶ್ಚಿಯನ್ ಆಗಿರುವುದರಿಂದ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಬೇಕು ಎಂದು ವಾಜಪೇಯಿ ಅವರನ್ನು ನಿರಂತರವಾಗಿ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಇದರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜಕೀಯವಾಗಿ ಅಸೌಕರ್ಯ ಉಂಟಾಗುತ್ತದೆ ಮತ್ತು ಭವಿಷ್ಯದಲ್ಲಿ ಅವರು ಪ್ರಧಾನಿಯಾಗುವ ಅವಕಾಶ ಕಡಿಮೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟಿದ್ದರು. ಅವರ ತರ್ಕದ ಪ್ರಕಾರ, ದೇಶದಲ್ಲಿ ಒಬ್ಬ ಕ್ರಿಶ್ಚಿಯನ್ ರಾಷ್ಟ್ರಪತಿ ಇದ್ದರೆ ಮತ್ತೊಬ್ಬ ಕ್ರಿಶ್ಚಿಯನ್ ಪ್ರಧಾನಿಯನ್ನು ದೇಶ ಒಪ್ಪಿಕೊಳ್ಳುವುದಿಲ್ಲ.
ಇನ್ನೊಂದೆಡೆ, ಆಗಿನ ಉಪರಾಷ್ಟ್ರಪತಿ ಕೃಷ್ಣಕಾಂತ್ ಅವರು ತಮ್ಮ ಉಮೇದುವಾರಿಕೆಗೆ ಎನ್‌ಡಿಎ ಸಂಚಾಲಕ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ನಾಯಕರ ಬೆಂಬಲದ ಮೇಲೆ ಅವಲಂಬಿತರಾಗಿದ್ದರು. ಈ ನಡುವೆಯೇ ಬಿಜೆಪಿಯೊಳಗಿಂದಲೇ ತಮ್ಮದೇ ಪಕ್ಷದ ಹಿರಿಯ ನಾಯಕರೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕೆಂಬ ಧ್ವನಿಗಳು ಕೇಳಿಬರಲು ಆರಂಭಿಸಿದವು. ವಾಜಪೇಯಿ ಎಲ್ಲರ ಅಭಿಪ್ರಾಯಗಳನ್ನು ಆಲಿಸುತ್ತಿದ್ದರೂ, ತಮ್ಮ ನಿಲುವನ್ನು ಬಹಿರಂಗಪಡಿಸುತ್ತಿರಲಿಲ್ಲ.
ಈ ಸಮಯದಲ್ಲಿ ನಿವೃತ್ತಿಯಾಗುತ್ತಿದ್ದ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರನ್ನು ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಸಲು ಇಡೀ ವಿರೋಧ ಪಕ್ಷ ಸಕ್ರಿಯವಾಗಿ ಪ್ರಯತ್ನಿಸಿತು. ಆದರೆ ನಾರಾಯಣನ್ ಅವರು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಷರತ್ತು ಹಾಕಿ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದರು.
ಲೇಖಕರ ಪ್ರಕಾರ, ವಾಜಪೇಯಿ ತಮ್ಮ ಪಕ್ಷದೊಳಗಿಂದಲೇ ಬಂದಿದ್ದ ಸಲಹೆಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. ಆ ಸಲಹೆಗಳ ಪ್ರಕಾರ, ಅವರು ಸ್ವತಃ ರಾಷ್ಟ್ರಪತಿ ಭವನಕ್ಕೆ ತೆರಳಿ, ಪ್ರಧಾನಮಂತ್ರಿ ಹುದ್ದೆಯನ್ನು ತಮ್ಮ ಎರಡನೇ ನಾಯಕ ಲಾಲ್‌ಕೃಷ್ಣ ಆಡುವಾಣಿಗೆ ಹಸ್ತಾಂತರಿಸಬೇಕೆಂಬ ಮಾತುಗಳು ಕೇಳಿಬಂದಿದ್ದವು. ವಾಜಪೇಯಿ ಇದಕ್ಕೆ ಸಮ್ಮತಿಸಲಿಲ್ಲ. ಜನಪ್ರಿಯ ಪ್ರಧಾನಿಯೊಬ್ಬರು ಬಹುಮತದ ಬಲದ ಮೇಲೆ ರಾಷ್ಟ್ರಪತಿಯಾಗುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ; ಇದು ಅತ್ಯಂತ ಕೆಟ್ಟ ಪರಂಪರೆಯ ಆರಂಭವಾಗುತ್ತದೆ ಮತ್ತು ಅಂತಹ ಕ್ರಮವನ್ನು ಬೆಂಬಲಿಸುವ ಕೊನೆಯ ವ್ಯಕ್ತಿ ನಾನು ಎಂಬ ನಿಲುವನ್ನು ಅವರು ಸ್ಪಷ್ಟವಾಗಿ ಹೊಂದಿದ್ದರು.
ರಾಷ್ಟ್ರಪತಿ ಅಭ್ಯರ್ಥಿ ಕುರಿತು ಒಮ್ಮತ ಮೂಡಿಸಲು ವಾಜಪೇಯಿ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದರು. “ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ ಮತ್ತು ಡಾ. ಮನಮೋಹನ್ ಸಿಂಗ್ ಅವರು ಅವರನ್ನು ಭೇಟಿಯಾದ ಕ್ಷಣ ನನಗೆ ಇನ್ನೂ ನೆನಪಿದೆ. ಎನ್‌ಡಿಎ ರಾಷ್ಟ್ರಪತಿ ಚುನಾವಣೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಿದೆ ಎಂದು ವಾಜಪೇಯಿ ಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದರು. ಕೆಲ ಕ್ಷಣಗಳ ಕಾಲ ಸಭೆಯಲ್ಲಿ ಮೌನ ಆವರಿಸಿತು,” ಎಂದು ಟಂಡನ್ ಬರೆಯುತ್ತಾರೆ.
ನಂತರ ಸೋನಿಯಾ ಗಾಂಧಿ ಮೌನ ಮುರಿದು, “ನಿಮ್ಮ ಆಯ್ಕೆಯಿಂದ ನಾವು ಅಚ್ಚರಿಗೊಂಡಿದ್ದೇವೆ. ಅವರನ್ನು ಬೆಂಬಲಿಸುವುದನ್ನು ಬಿಟ್ಟು ನಮಗೆ ಬೇರೆ ಮಾರ್ಗವಿಲ್ಲ. ಆದರೆ ನಿಮ್ಮ ಪ್ರಸ್ತಾವನೆಯನ್ನು ಪಕ್ಷದೊಳಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ,” ಎಂದು ಹೇಳಿದರು. ಬಳಿಕ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ತಮ್ಮ ಪಕ್ಷದ ಬೆಂಬಲವನ್ನು ಘೋಷಿಸಿ, “ಡಾ. ಕಲಾಂ ನನ್ನ ಆಯ್ಕೆ,” ಎಂದು ಹೇಳಿದರು. ಆ ನಂತರದ ಬೆಳವಣಿಗೆಗಳು ಇತಿಹಾಸವಾಗಿವೆ.
ಪುಸ್ತಕದಲ್ಲಿ ಮತ್ತೊಂದು ವಿಷಯವೂ ಉಲ್ಲೇಖವಾಗಿದೆ. 2002ರಲ್ಲಿ ಡಾ. ಪಿ.ಸಿ. ಅಲೆಕ್ಸಾಂಡರ್ ತಮ್ಮ ಆತ್ಮಚರಿತ್ರೆಯಲ್ಲಿ, ತಾವು ರಾಷ್ಟ್ರಪತಿಯಾಗದಿರುವುದಕ್ಕೆ ಹಲವರನ್ನು ಹೊಣೆಗಾರರನ್ನಾಗಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಕುಂವರ್ ನಟವರ್ ಸಿಂಗ್ ಅವರ ಪ್ರಕಾರ, ಡಾ. ಅಲೆಕ್ಸಾಂಡರ್ ಅವರು ಅವರನ್ನು ಹಾಗೂ ವಾಜಪೇಯಿ ಅವರ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ ಅವರನ್ನು ಕೂಡ ಇದಕ್ಕೆ ದೋಷಾರೋಪಣೆ ಮಾಡಿದ್ದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಹೊರಬಂದದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು, ಏಕೆಂದರೆ ಅವರ ಹೆಸರು ಆರಂಭಿಕ ಚರ್ಚೆಗಳಲ್ಲೇ ಇರಲಿಲ್ಲ.
ಒಟ್ಟಿನಲ್ಲಿ, ವಾಜಪೇಯಿ ಅವರ ಸಂವಿಧಾನಾತ್ಮಕ ಚಿಂತನೆ, ಸಂಸದೀಯ ಪ್ರಜಾಪ್ರಭುತ್ವದ ಸಮತೋಲನದ ಬಗ್ಗೆ ಅವರ ಆಳವಾದ ಕಾಳಜಿ ಮತ್ತು ರಾಷ್ಟ್ರಪತಿ ಹುದ್ದೆಯ ಗೌರವವನ್ನು ರಾಜಕೀಯ ಲೆಕ್ಕಾಚಾರಗಳಿಂದ ದೂರವಿಡಬೇಕೆಂಬ ಅವರ ದೃಷ್ಟಿಕೋನವನ್ನು ಈ ಪುಸ್ತಕ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa