ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಬೆಂಗಳೂರು, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಲೋಕಾಯುಕ್ತ ಇಲಾಖೆ ಬಿಸಿ ಮುಟ್ಟಿಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಲವಾರು ಹಿರಿಯ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಏಕಕಾಲಕ್
Raid


ಬೆಂಗಳೂರು, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಲೋಕಾಯುಕ್ತ ಇಲಾಖೆ ಬಿಸಿ ಮುಟ್ಟಿಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಲವಾರು ಹಿರಿಯ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ದಾಳಿಗಳ ವೇಳೆ ಕೆಲವೆಡೆ ಮಹತ್ವದ ದಾಖಲೆಗಳು, ಆಸ್ತಿ ವಿವರಗಳು ಹಾಗೂ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು ಹಾಗೂ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.

ಬೆಳಗಾವಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್ ಅವರಿಗೆ ಸೇರಿದ ಧಾರವಾಡದ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸ, ರಾಣಿ ಚೆನ್ನಮ್ಮ ನಗರದಲ್ಲಿರುವ ಖಾಸಗಿ ಕಚೇರಿ ಹಾಗೂ ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿದೆ.

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವ ಆರೋಪದ ಹಿನ್ನೆಲೆ ಶಿವಮೊಗ್ಗ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ ಅವರ ವಿರುದ್ಧವೂ ಲೋಕಾಯುಕ್ತ ದಾಳಿ ನಡೆದಿದೆ.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಬಸವನಗುಡಿ ಮತ್ತು ಕೆಂಗೇರಿಯಲ್ಲಿನ ಮನೆಗಳು, ಶಿವಮೊಗ್ಗದ ಕಚೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿರುವ ನಿವಾಸದಲ್ಲಿ ಪರಿಶೀಲನೆ ನಡೆದಿದೆ. ಈ ವೇಳೆ ಅಧಿಕ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಮಂಡ್ಯ ಸಾರ್ವಜನಿಕ ಕಾರ್ಯ ಇಲಾಖೆ ಸೂಪರಿಡೆಂಟ್ ಬೈರೇಶ್ ಅವರ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಮಂಡ್ಯದ ನಿವಾಸ, ಮದ್ದೂರಿನ ಅತ್ತೆ ಮನೆ ಹಾಗೂ ಕಚೇರಿಯಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಗಿದೆ.

ಬೈರೇಶ್ ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದ ಹಿನ್ನೆಲೆ ಈ ದಾಳಿ ನಡೆದಿದ್ದು, ಆಸ್ತಿ, ಬ್ಯಾಂಕ್ ದಾಖಲೆಗಳು ಹಾಗೂ ಇತರೆ ಹಣಕಾಸು ವ್ಯವಹಾರಗಳ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು ಪರಿಶೀಲನೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande