
ಅಮ್ಮನ್, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರು ಇಂದು ಅಮ್ಮನ್‌ನಲ್ಲಿ ನಡೆಯಲಿರುವ ಭಾರತ–ಜೋರ್ಡಾನ್ ವ್ಯಾಪಾರ ಶೃಂಗಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶೃಂಗಸಭೆಯಲ್ಲಿ ಎರಡೂ ದೇಶಗಳ ಪ್ರಮುಖ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ, ಪ್ರಧಾನಿ ಮೋದಿ ಜೋರ್ಡಾನ್ ರಾಜಕುಮಾರರೊಂದಿಗೆ ಐತಿಹಾಸಿಕ ಪೆಟ್ರಾ ನಗರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಾಚೀನ ಕಾಲದಿಂದಲೂ ಭಾರತ–ಪೆಟ್ರಾ ನಡುವೆ ವ್ಯಾಪಾರ ಸಂಬಂಧಗಳು ಇತ್ತು ಎನ್ನಲಾಗುತ್ತದೆ.
ರಾಜ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಜೋರ್ಡಾನ್‌ಗೆ ಆಗಮಿಸಿದ್ದು, ಹುಸೇನಿಯಾ ಅರಮನೆಯಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ನಿಯೋಗ ಮಟ್ಟದ ಮಾತುಕತೆಗೆ ಮುನ್ನ ಇಬ್ಬರು ನಾಯಕರು ಮುಖಾಮುಖಿ ಸಭೆ ನಡೆಸಿದರು.
ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಎರಡೂ ದೇಶಗಳ ನಡುವಿನ ಒಟ್ಟು ವ್ಯಾಪಾರ ಮೊತ್ತ ಸುಮಾರು 2.8 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಫಾಸ್ಫೇಟ್ ಮತ್ತು ಪೊಟ್ಯಾಶ್ ಸೇರಿದಂತೆ ರಸಗೊಬ್ಬರಗಳ ಪ್ರಮುಖ ಪೂರೈಕೆದಾರರಾಗಿ ಜೋರ್ಡಾನ್ ಭಾರತಕ್ಕೆ ಮಹತ್ವದ ಸ್ಥಾನ ಹೊಂದಿದೆ. ಜೋರ್ಡಾನ್‌ನಲ್ಲಿ 17,500 ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದು, ಜವಳಿ, ನಿರ್ಮಾಣ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಅವರು ಕಾರ್ಯನಿರತರಾಗಿದ್ದಾರೆ.
ಪ್ರಧಾನಿ ಮೋದಿಯವರ ನಾಲ್ಕು ದಿನಗಳ ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಜೋರ್ಡಾನ್ ಮೊದಲ ಭೇಟಿಯಾಗಿದೆ. ಭೇಟಿಯ ನಂತರ ಅವರು ಇಥಿಯೋಪಿಯಾ ಹಾಗೂ ಒಮಾನ್‌ಗೆ ತೆರಳಲಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಧಾನಿ ಮೋದಿ, ರಾಜ ಅಬ್ದುಲ್ಲಾ II ಅವರೊಂದಿಗೆ ಫಲಪ್ರದ ಚರ್ಚೆ ನಡೆದಿರುವುದಾಗಿ ತಿಳಿಸಿದ್ದು, ಈ ವರ್ಷ ಭಾರತ–ಜೋರ್ಡಾನ್ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎರಡು ರಾಷ್ಟ್ರಗಳ ಸಹಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಎಂಟು ಅಂಶಗಳ ದೃಷ್ಟಿಕೋನ ದಾಖಲೆ ಹಂಚಿಕೊಳ್ಳಲಾಗಿದೆ. ಇದರಲ್ಲಿ ವ್ಯಾಪಾರ–ಆರ್ಥಿಕ ಸಹಕಾರ, ರಸಗೊಬ್ಬರ ಮತ್ತು ಕೃಷಿ, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಮೂಲಸೌಕರ್ಯ, ನಿರ್ಣಾಯಕ ಖನಿಜಗಳು, ನಾಗರಿಕ ಪರಮಾಣು ಸಹಕಾರ ಹಾಗೂ ಜನರಿಂದ–ಜನರಿಗೆ ಸಂಬಂಧಗಳು ಸೇರಿವೆ.
ಭಯೋತ್ಪಾದನೆ ವಿರುದ್ಧ ಎರಡೂ ದೇಶಗಳು ಒಂದೇ ದೃಢ ನಿಲುವು ಹೊಂದಿವೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದು, ಗಾಜಾ ವಿಷಯದಲ್ಲಿ ರಾಜ ಅಬ್ದುಲ್ಲಾ II ಅವರ ಸಕ್ರಿಯ ಪಾತ್ರವನ್ನು ಶ್ಲಾಘಿಸಿದ್ದಾರೆ. ಭಾರತ–ಜೋರ್ಡಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಎರಡೂ ನಾಯಕರು ಪುನರುಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa